ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡುವಲ್ಲಿ ವಿಫಲ: ವಿದ್ಯಾರ್ಥಿನಿ ಆತ್ಮಹತ್ಯೆ

ಪುತ್ತೂರು, ನ.26: ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡುವಲ್ಲಿ ವಿಫಲವಾದ ಬೇಸರದಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಸಂಪ್ಯದಲ್ಲಿ ನಡೆದಿದೆ.

ಆರ್ಯಾಪು ಗ್ರಾಮದ ಸಂಪ್ಯ ನಿವಾಸಿ, ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿಶಾ(17) ಮೃತಪಟ್ಟವರು.

ಎರಡು ವಾರಗಳ ಹಿಂದೆ ಬಿಹಾರದಲ್ಲಿ ನಡೆದಿದ್ದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ನಿಶಾ ರನ್ನಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ ಸ್ಪರ್ಧೆಯಲ್ಲಿ ಯಾವುದೇ ಸಾಧನೆ ಮಾಡುವಲ್ಲಿ ವಿಫಲರಾದ ಕಾರಣ ಬೇಸರಗೊಂಡಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಖಿನ್ನತೆಗೆ ಒಳಗಾಗಿದ್ದ ನಿಶಾ ನ.13ರಂದು ಮನೆಯಲ್ಲಿದ್ದ ತೋಟಕ್ಕೆ ಸಿಂಪಡಿಸುವ ಕೀಟನಾಶವನ್ನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾಗಿದೆ.

ಅಸ್ವಸ್ಥಗೊಂಡಿದ್ದ ನಿಶಾರನ್ನು ಮನೆಯವರು ವಿಚಾರಿಸಿದಾಗ ಕೀಟನಾಶಕ ಸೇವಿಸಿರುವ ವಿಚಾರ ಬೆಳಕಿಗೆ ಬಂದಿತ್ತು. ತಕ್ಷಣವೇ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.

Leave a Reply

Your email address will not be published. Required fields are marked *

error: Content is protected !!