ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ಕೋಟ್ಯಾಂತರ ರೂ. ಅವ್ಯವಹಾರ- ಬೈಕಾಡಿ ಸುಪ್ರಸಾದ್ ಸಹಿತ 18 ಮಂದಿಯ ಜಾಮೀನು ಅರ್ಜಿ ವಜಾ
ಉಡುಪಿ: ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಸ್ಥಾವರ ಹಾಗೂ ಯಂತ್ರೋಪಕರಣಗಳ ಮಾರಾಟಕ್ಕೆ ಸಂಬಂಧಿಸಿದ ಬಹುಕೋಟಿ ಹಗರಣದ 18 ಮಂದಿ ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿ ಇಂದು ಆದೇಶ ನೀಡಿದೆ.
ಕಾರ್ಖಾನೆಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಅಕ್ಟೋಬರ್ 21ರಂದು ಉಡುಪಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಬ್ರಹ್ಮಾವರ ಪೊಲೀಸರಿಗೆ ನಿರ್ದೇಶನ ನೀಡಿತ್ತು.
ಅದರಂತೆ ಸತೀಶ್ ಕಿಣಿ ನೀಡಿದ ಖಾಸಗಿ ದೂರಿನಂತೆ ಅ.25ರಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬ್ರಹ್ಮಾವರದಲ್ಲಿರುವ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಲಿಮಿಟೆಡ್ ಅಧೀನದಲ್ಲಿರುವ ಸಕ್ಕರೆ ಕಾರ್ಖಾನೆಗೆ ಸಂಬಂಧ ಪಟ್ಟಂತೆ ಒಟ್ಟು 25 ಮಂದಿ ಆರೋಪಿಗಳು ಸೇರಿ 2021ರ ಆ.18ರಿಂದ 2022ರ ಡಿ.5ರ ಮಧ್ಯಾವಧಿಯಲ್ಲಿ ಕಾರ್ಖಾನೆಯ ಸಕ್ಕರೆ ಸ್ಥಾವರ ಮತ್ತು ಯಂತ್ರೋಪಕರಣಗಳ ಮಾರಾಟಕ್ಕೆ ಸಂಬಂಧಿಸಿದಂತೆ ಟೆಂಡರ್ ಕಮ್ ಹರಾಜು ಪ್ರಕ್ರಿಯೆಯಲ್ಲಿ ವಂಚನೆ, ದಾಖಲೆಗಳನ್ನು ರಚಿಸಿ, ವೈಯಕ್ತಿಕ ಲಾಭ ಪಡೆಯುವ ಉದ್ದೇಶದಿಂದ ಪರಸ್ಪರ ಪಿತೂರಿ ನಡೆಸಿದ್ದರು.
ಕಾನೂನು ಬಾಹಿರ ಟೆಂಡರ್ ಪ್ರಕ್ರಿಯೆಯ ಮೂಲಕ ನಂಬಿಕೆ ದ್ರೋಹ, ದುರುಪಯೋಗ, ವಂಚನೆಯ ಮೂಲಕ ಸುಳ್ಳುತನ ದಿಂದ ಕಂಪನಿಯ ದಾಖಲೆಗಳ ನ್ನು ತಯಾರಿಸಿ ಸಕ್ಕರೆ ಕಾರ್ಖಾನೆಯ ಸ್ಕ್ಯಾಪ್‌ಗಳನ್ನು ಮಾರಾಟ ಮಾಡಿ, ರೈತರಿಗೆ ಮತ್ತು ಸರಕಾರಕ್ಕೆ 14 ಕೋಟಿಗಿಂತ ಕಡಿಮೆ ಇಲ್ಲದಷ್ಟು ಹಣವನ್ನು ಭಾರೀ ಆರ್ಥಿಕ ನಷ್ಟವನ್ನು ಉಂಟುಮಾಡಿ ಅಪರಾಧ ಎಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಗಳಾದ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಲಿಮಿಟೆಡ್ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ಉಮಾನಾಥ್ ಶೆಟ್ಟಿ, ನಿರ್ದೇಶಕರುಗಳಾದ ಆಸ್ತಿಕ ಶಾಸ್ತ್ರಿ, ಸುಬ್ಬ ಬಿಲ್ಲವ, ಸಂತೋಷ್ ಕುಮಾರ್ ಶೆಟ್ಟಿ, ಸನ್ಮತ್ ಹೆಗ್ಡೆ, ರತ್ನಾಕರ ಗಾಣಿಗ, ವಾಸಂತಿ ಆರ್. ಶೆಟ್ಟಿ, ಹೇಮಲತಾ ಯು.ಶೆಟ್ಟಿ, ಗೀತಾ ಶಂಭು ಪೂಜಾರಿ, ಸಿಬ್ಬಂದಿಗಳಾದ ಗೋಪಾಲಕೃಷ್ಣ ಎಂ., ರಮಾನಂದ ನೀಲಾವರ, ಉದಯ ಆಚಾರ್, ರಾನಿ ಡಿಸೋಜ, ಶಂಕರ್ ಯು.ಎನ್., ಪದ್ಮನಾಭ, ವಿಶ್ವನಾಥ್ ಶೆಟ್ಟಿ, ಗಣೇಶ್ ಪೂಜಾರಿ ಎಂಬವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ಶಾಂತವೀರ ಶಿವಪ್ಪ ಎಲ್ಲ 18 ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದರು. ಸರಕಾರದ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಜಯರಾಂ ಶೆಟ್ಟಿ ವಾದಿಸಿದರು.