ಜಾತಿ ಗಣತಿ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸಿ: ಸುನಿಲ್‌ ಕುಮಾರ್

ಬೆಂಗಳೂರು : ಸಾಮಾಜಿಕ ನ್ಯಾಯದ ಬಗ್ಗೆ ಸಿದ್ದರಾಮಯ್ಯನವರಿಗೆ ನಿಜಕ್ಕೂ ಬದ್ಧತೆ ಇದ್ದರೆ ವರದಿ ಅಧ್ಯಯನದ ಬಗ್ಗೆ ಸಂಪುಟ ಉಪಸಮಿತಿ ರಚಿಸುವ ಇನ್ನೊಂದು ನಾಟಕ ಕೈ ಬಿಟ್ಟು ಹಿಂದಿನ ತಪ್ಪುಗಳ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲಿ ಎಂದು ಮಾಜಿ ಸಚಿವ ವಿ.ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜಾತಿ ಗಣತಿ ವರದಿಯಲ್ಲಿನ ಗೋಜಲುಗಳನ್ನು ಗಮನಿಸಿದರೆ ಇದೊಂದು ದೊಡ್ಡ ಹಗರಣ ಎಂಬುದರಲ್ಲಿ ಅನುಮಾನವೇ ಇಲ್ಲ. 162 ಕೋಟಿ ರೂ.ವೆಚ್ಚದಲ್ಲಿ ತಯಾರಿಸಿದ ವರದಿಯ ಉದ್ದೇಶವೇ ಈಡೇರುತ್ತಿಲ್ಲ ಎಂದರೆ ಅರ್ಥವೇನು ? ಎಂದು ಪ್ರಶ್ನಿಸಿದ್ದಾರೆ. ವರದಿ ಬಗ್ಗೆ ಇಷ್ಟೆಲ್ಲ ಚರ್ಚೆ ನಡೆಯುತ್ತಿದ್ದರೂ ಆಯೋಗದ ಹಿಂದಿನ ಅಧ್ಯಕ್ಷ ಕಾಂತರಾಜ್ ನಾಪತ್ತೆಯಾಗಿದ್ದಾರೆ. ವರದಿಗೆ ಏಕೆ ಸಹಿ ಹಾಕಿಲ್ಲ ಎಂಬ ಬಗ್ಗೆ ಸದಸ್ಯ ಕಾರ್ಯದರ್ಶಿ ಮಗುಮ್ಮಾಗಿದ್ದಾರೆ. ಆಯೋಗದ ವರದಿಗೆ ಅವರು ಅಂದು ಸಹಿ ಹಾಕಿಲ್ಲ ಎಂದರೆ ತಾವು ಈ ವರದಿಯ ಭಾಗವಾಗಲು ತಯಾರಿಲ್ಲ ಎಂದರ್ಥವಲ್ಲವೇ ? ಅಂದರೆ ವರದಿ ತಯಾರಿ ಹಂತದಲ್ಲೇ ಭಾರಿ ಲೋಪ ಹಾಗೂ ಅವ್ಯವಹಾರ ನಡೆದಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದ್ದಾರೆ.

ಸಾಮಾಜಿಕ ನ್ಯಾಯದ ಬಗ್ಗೆ ಸಿದ್ದರಾಮಯ್ಯನವರಿಗೆ ನಿಜಕ್ಕೂ ಬದ್ಧತೆ ಇದ್ದರೆ ವರದಿ ಅಧ್ಯಯನದ ಬಗ್ಗೆ ಸಂಪುಟ ಉಪಸಮಿತಿ ರಚಿಸುವ ಇನ್ನೊಂದು ನಾಟಕ ಕೈ ಬಿಟ್ಟು ಹಿಂದಿನ ತಪ್ಪುಗಳ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲಿ ಎಂದು ಒತ್ತಾಯಿಸಿದ್ದಾರೆ. ಮೂಲ ಪ್ರತಿಯೇ ಇಲ್ಲದ, ಕಾರ್ಯದರ್ಶಿಯ ಸಹಿಯೇ ಇಲ್ಲದ ಜಾತಿ ಗಣತಿ ವರದಿ ಎಂದರೆ ” ಮದುವೆ ಗಂಡಿಗೆ ಬಾಶಿಂಗವೇ ಇಲ್ಲ”ದಂತೆ. ಸಿದ್ದರಾಮಯ್ಯನವರೇ ಹಿಂದುಳಿದ ವರ್ಗ ಹಾಗೂ ದಲಿತ ಸಮುದಾಯಕ್ಕೆ ಎಂಥ ದ್ರೋಹ ಮಾಡಿ ಬಿಟ್ಟಿರಿ ! ನೀವೆಸಗಿದ ಈ ತಪ್ಪನ್ನು ಇತಿಹಾಸ ಕ್ಷಮಿಸದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಬರೋಬ್ಬರಿ 162 ಕೋಟಿ ರೂ. ವೆಚ್ಚ ಮಾಡಿ ತಯಾರಿಸಿದ ಜಾತಿ ಗಣತಿಯ ವರದಿಯೇ ಲಭ್ಯವಿಲ್ಲ ಎಂದರೆ ಇದಕ್ಕೆ ಹೊಣೆ ಯಾರು ? ಪೋರ್ಜರಿ ವರದಿ ತಯಾರಿಸಿ ರಾಹುಲ್ ಗಾಂಧಿಯವರನ್ನು‌ ಮೆಚ್ಚಿಸಲು ಹೊರಟಿದ್ದೀರಾ ? ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!