ಕಾರ್ಮಿಕರ ಮಕ್ಕಳ ಸ್ಕಾಲರ್ ಶಿಪ್ ಮೊತ್ತ ಕಡಿತ ಖಂಡನೀಯ-ಸುರೇಶ್ ಕಲ್ಲಾಗರ
ಉಡುಪಿ: ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಬೋಗಸ್ ಕಾರ್ಡ್ ಹೆಚ್ಚಾಗಿವೆ ಎಂಬ ನೆಪವೊಡ್ಡಿ ಶೇ. 75-80ರಷ್ಟು ಸ್ಕಾಲರ್ ಶಿಪ್ ಕಡಿತ ಮಾಡಿರುವುದು ಖಂಡನೀಯ. ಬಡ ಕಾರ್ಮಿಕರ ಮಕ್ಕಳ ಸ್ಕಾಲರ್ ಶಿಪ್ ಮೊತ್ತದಲ್ಲಿ ಕಡಿತಗೊಳಿಸದೆ, ಈ ಹಿಂದೆ ನೀಡಲಾಗುತ್ತಿದ್ದ ಮೊತ್ತವನ್ನೇ ನೀಡಲು ರಾಜ್ಯ ಸರಕಾರ ತಕ್ಷಣವೇ ಕ್ರಮಕೈಕೊಳ್ಳಬೇಕು ಎಂದು ಕಟ್ಟಡ ಕಾರ್ಮಿಕ ಸಂಘಗಳ ಕುಂದಾಪುರ ತಾಲೂಕು ಅಧ್ಯಕ್ಷ ಸುರೇಶ್ ಕಲ್ಲಾಗರ ಒತ್ತಾಯಿಸಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1ರಿಂದ 4ನೇ ತರಗತಿಯ ಮಕ್ಕಳಿಗೆ ಹಿಂದೆ ಸಿಗುತ್ತಿದ್ದ 5 ಸಾವಿರ ರೂ. ಶೈಕ್ಷಣಿಕ ಧನಸಹಾಯವನ್ನು 1100 ರೂ. ಗೆ ಇಳಿಸಲಾಗಿದೆ. ಪ್ರೌಢಶಾಲೆ, ಪಿಯುಸಿ, ಪದವಿ, ಎಂಜಿನಿಯರಿಂಗ್, ಡಿಪ್ಲೊಮಾ ಸಹಿತ ವಿವಿಧ ಕೋರ್ಸ್ ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾರ್ಮಿಕರ ಮಕ್ಕಳ ಸ್ಕಾಲರ್‌ಶಿಪ್ ಮೊತ್ತವನ್ನು ಕಡಿತ ಮಾಡಲಾಗಿದೆ. ಬೋಗಸ್ ಕಾರ್ಡ್ ಹೆಚ್ಚಳ ಎಂಬ ಕಾರಣವೊಡ್ಡಿ ಈ ರೀತಿ ನಿರ್ಧಾರ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಡಬ್ಲ್ಯುಎಫ್ ಐ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕಲ್ಯಾಣ ಮಂಡಳಿಯಲ್ಲಿ ಹಣವಿಲ್ಲ ಎಂದು ಹೇಳುವ ಕಾರ್ಮಿಕ ಮಂತ್ರಿಗಳು, ಖಾಸಗಿ ಆಸ್ಪತ್ರೆೆಗೆ ವೈದ್ಯಕೀಯ ತಪಾಸಣೆ ನಡೆಸಲು ಆದೇಶ ಹೊರಡಿಸಿದ್ದಾರೆ. ಇದಕ್ಕಾಗಿ ಕಳೆದ 2 ವರ್ಷಗಳಲ್ಲಿ ಕೋಟ್ಯಾಂತರ ರೂಪಾಯಿ ಪೋಲು ಮಾಡಲಾಗಿದೆ. ಆದರೆ, ವೈದ್ಯಕೀಯ ತಪಾಸಣೆಯಿಂದ ಕಾರ್ಮಿಕರಿಗೆ ಯಾವುದೇ ಪ್ರಯೋಜನವಾಗಿಲ್ಲ. ಇದು ಕೇವಲ ಖಾಸಗಿ ಆಸ್ಪತ್ರೆೆಗೆ ಅನುಕೂಲ ಮಾಡಿಕೊಡುವ ಹುನ್ನಾರ. ಹೀಗಾಗಿ ಕಾರ್ಮಿಕರು ವೈದ್ಯಕೀಯ ತಪಾಸಣೆಯನ್ನು ಬಹಿಷ್ಕಾರ ಮಾಡಬೇಕು ಎಂದು ಮನವಿ ಮಾಡಿದರು.
ಸ್ಕಾಲರ್‌ಶಿಪ್‌ನಲ್ಲಿ ಕಡಿತ, ಖಾಸಗಿ ಆಸ್ಪತ್ರೆಗೆ ನೆರವಾಗುವ ವೈದ್ಯಕೀಯ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರ ನೀತಿಯನ್ನು ಪ್ರತಿಭಟಿಸಲು ನ.29ರಂದು ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಎದುರು ರಾಜ್ಯಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಬಾಲಕೃಷ್ಣ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಯು. ಶಿವಾನಂದ್, ಚಿಕ್ಕ ಮೊಗವೀರ, ಶಶಿಕಲಾ ಇದ್ದರು.