ಜಮ್ಮು-ಕಾಶ್ಮೀರ: ರಜೌರಿಯಲ್ಲಿ ಗುಂಡಿನ ಚಕಮಕಿ- ಕರ್ನಾಟಕದ ಕ್ಯಾ| ಪ್ರಾಂಜಲ್ ಸಹಿತ ನಾಲ್ವರು ಹುತಾತ್ಮ
ಜಮ್ಮು – ಕಾಶ್ಮೀರ: ಇಲ್ಲಿನ ರಜೌರಿ ಜಿಲ್ಲೆಯಲ್ಲಿ ಬುಧವಾರ ಉಗ್ರರ ಜತೆಗಿನ ಗುಂಡಿನ ಚಕಮಕಿಯಲ್ಲಿ ಸೇನೆಯ ಇಬ್ಬರು ಕ್ಯಾಪ್ಟನ್‌ಗಳು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಮೇಜರ್ ಮತ್ತು ಯೋಧ ಗಾಯಗೊಂಡಿದ್ದು, ಅವರನ್ನು ಉಧಂಪುರದ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಜೌರಿಯ ಬಜಿಮಾಲ್ ಎಂಬಲ್ಲಿರುವ ಅರಣ್ಯ ಪ್ರದೇಶದಲ್ಲಿ ಉಗ್ರರು ಇದ್ದಾರೆ ಎಂಬ ಸುಳಿವಿನ ಹಿನ್ನೆಲೆಯಲ್ಲಿ ಸೇನೆ ಮತ್ತು ಪೊಲೀಸರ ಜಂಟಿ ತಂಡ ಅಲ್ಲಿ ಶೋಧ ಕಾರ್ಯ ಆರಂಭಿಸಿತ್ತು. ಆಗ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಸೇನಾಧಿಕಾರಿಗಳು ಮತ್ತು ಇಬ್ಬರು ಯೋಧರು ಹುತಾತ್ಮರಾದರು. ಯೋಧರ ಪ್ರತಿದಾಳಿಯಲ್ಲಿ ಉಗ್ರರಿಗೂ ಗಾಯಗಳಾಗಿವೆ ಎಂದು ಭೂಸೇನೆಯ ನೈಟ್ ಕಾಪ್ಸ್ ಟ್ವೀಟ್ ಮಾಡಿದೆ.
ಉಗ್ರರನ್ನು ಮಟ್ಟ ಹಾಕಲು ಹೆಚ್ಚುವರಿಯಾಗಿ ಸೇನಾಪಡೆಗಳನ್ನು ರವಾನಿಸಲಾಗಿದೆ ಎಂದು ನೈಟ್‌ಕಾಪ್ಸ್ ತಂಡ ಅಧಿಕಾರಿಗಳು ಹೇಳಿ ದ್ದಾರೆ. ಕಳೆದ ವಾರ ರಜೌರಿಯಲ್ಲಿ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಪಾಕ್ ಮೂಲದ ಉಗ್ರನೊಬ್ಬನನ್ನು ಕೊಲ್ಲಲಾಗಿತ್ತು.
ಉಗ್ರರು ಅಡಗಿದ್ದಾರೆ ಎಂಬ ಸುಳಿವಿನ ಹಿನ್ನೆಲೆಯಲ್ಲಿ ರವಿವಾರ ದಿಂದಲೇ ಪೊಲೀಸರು ಮತ್ತು ಭೂಸೇನೆಯ ಜಂಟಿ ತಂಡ ಶೋಧ ನಡೆಸುತ್ತಿತ್ತು. ಹೀಗಾಗಿ
ನಮ್ಮನ್ನು ಮನೆಯ ಒಳಗೆ ಇರುವಂತೆ ಸೂಚಿಸಲಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಜಮ್ಮು-ಕಾಶ್ಮೀರದ ಕಡಿದಾದ ಪರ್ವತ ಪ್ರದೇಶಗಳ ದಟ್ಟ ಅರಣ್ಯಗಳಲ್ಲಿ ಅಡಗಿ ದಾಳಿ ಎಸಗುವ ಮೂಲಕ ಸೇನೆಗೆ ತಲೆನೋವು ತರುತ್ತಿದ್ದಾರೆ.
ಮೇಜರ್ ಪದೋನ್ನತಿಗೆ ಕಾಯುತ್ತಿದ್ದ ದ.ಕ ಜಿಲ್ಲೆಯ ಜನತೆ: ಉಗ್ರರ ಜತೆಗೆ ಹೋರಾಡಿ ಹುತಾತ್ಮರಾದ ಅಧಿಕಾರಿಗಳಲ್ಲಿ 63 ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ (29)ಓರ್ವರಾಗಿದ್ದು, ಇವರು ಎಂಆರ್‌ಪಿಎಲ್‌ನ ನಿವೃತ್ತ ಆಡಳಿತ ನಿರ್ದೇಶಕ ಎಂ. ವೆಂಕಟೇಶ್ ಅವರ ಏಕೈಕ ಪುತ್ರ. ಪ್ರಾಂಜಲ್ ಎಂ.ವಿ. ಅವರು ಎಸೆಸೆಲ್ಸಿವರೆಗೆ ಎಂಆರ್‌ಪಿಎಲ್ ಸಮೀಪವೇ ಇರುವ ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸವನ್ನು ಮಾಡಿದ್ದರು. ಬಳಿಕ ನ್ಯಾಶನಲ್ ಡಿಫೆನ್ಸ್ ಅಕಾಡೆಮಿ ಯಲ್ಲಿ ಕಲಿತು ಕರ್ತವ್ಯದಲ್ಲಿ ಇರುವಾಗಲೇ ಎಂಜಿನಿಯರಿಂಗ್ ಶಿಕ್ಷಣವನ್ನು ಉನ್ನತ ಶ್ರೇಣಿಯಲ್ಲಿ ಪೂರೈಸಿದರು. ಕ್ಯಾಪ್ಟನ್ ಹುದ್ದೆಯಿಂದ ಮೇಜರ್ ಹುದ್ದೆಗೆ ಪದೋನ್ನತಿಗೆ ಕಾಯುತ್ತಿರುವಾಗಲೇ ಅವರ ಬಲಿದಾನದ ಸಿಡಿಲಾಘಾತ ಕುಟುಂಬಕ್ಕೆ ಎದುರಾಗಿದೆ. ಕ್ಯಾ| ಪ್ರಾಂಜಲ್ ಅವರ ಪತ್ನಿ ಅದಿತಿ ಅವರು ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದಾರೆ. ವೆಂಕಟೇಶ್ ಅವರು ಪ್ರಸ್ತುತ ಬೆಂಗಳೂರು ನಿವಾಸಿಯಾಗಿದ್ದಾರೆ. ಕ್ಯಾ| ಪ್ರಾಂಜಲ್ ಅವರ ಪಾರ್ಥಿವ ಶರೀರ ಗುರುವಾರ ಬೆಂಗಳೂರಿಗೆ ಆಗಮಿಸಲಿದ್ದು, ಬನ್ನೇರುಘಟ್ಟದಲ್ಲಿ ಸಕಲ ಮಿಲಿಟರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ.