ಸಂಜೀವಿನಿ ಕಾರ್ಯಕರ್ತರ ಉದ್ಯೋಗ ಖಾಂ ಗೊಳಿಸಲು ಆಗ್ರಹಿಸಿ ಪ್ರತಿಭಟನೆ

ಉಡುಪಿ, ನ.19: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ‘ಸಂಜೀವಿನಿ’ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಖ್ಯ ಪುಸ್ತಕ ಬರಹಗಾರರು (ಎಂಬಿಕೆ) ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ(ಎಲ್‌ಸಿಆರ್‌ಪಿ)ಗಳು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನ.20 ರಂದು ಮುಷ್ಕರ ಹಮ್ಮಿಕೊಂಡಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಗ್ರಾಪಂ ಮಟ್ಟದ ಎಂಬಿಕೆ ಮತ್ತು ಎಲ್‌ಸಿಆರ್‌ಪಿ ಮಹಾಒಕ್ಕೂಟದ ಕುಂದಾಪುರ ಘಟಕದ ಅಧ್ಯಕ್ಷೆ ವಸಂತಿ ಈ ವಿಷಯ ತಿಳಿಸಿದರು. ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನ.20ರಂದು ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗುವುದು ಎಂದರು. 

ಜಿಲ್ಲೆಯಲ್ಲಿ ಒಟ್ಟು 155 ಗ್ರಾಪಂಗಳ ವ್ಯಾಪ್ತಿಯಲ್ಲಿ 155 ಎಂಬಿಕೆ ಮತ್ತು 465 ಎಲ್‌ಸಿಆರ್‌ಪಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಎಂಬಿಕೆಗಳಿಗೆ 5000ರೂ. ಮತ್ತು ಎಲ್‌ಸಿಆರ್‌ಪಿಗಳಿಗೆ 2500ರೂ. ಗೌರವಧನ ನೀಡಲಾಗುತ್ತಿದೆ. ಆದರೆ ನಮಗೆ ಈ ವೇತನ ಸಾಕಾಗುವುದಿಲ್ಲ. ಆದುದರಿಂದ ಗೌರವ ಧನದ ಬದಲು ವೇತನ ನೀಡಬೇಕು ಎಂದು ಅವರು ಹೇಳಿದರು. 

ನಮ್ಮ ಹುದ್ದೆಯನ್ನು ಖಾಯಂಗೊಳಿಸಿ 3ವರ್ಷದ ನಂತರ ಸರಕಾರವೇ ವೇತನ ಭರಿಸಬೇಕು. ಎಂಬಿಕೆ ಗಳಿಗೆ 20000ರೂ. ಮತ್ತು ಎಲ್‌ಸಿಆರ್‌ಪಿಗಳಿಗೆ 15 ಸಾವಿರ ರೂ. ವೇತನವನ್ನು ಪ್ರಯಾಣ ಭತ್ಯೆ ಜೊತೆ ನೀಡಬೇಕು. ಇಎಸ್‌ಐ ಮತ್ತು ಪಿಎಫ್ ಸೌಲಭ್ಯವನ್ನು ಒದಗಿಸಬೇಕು. ಸಮವಸ್ತ್ರ ಹಾಗೂ ಗುರುತಿನ ಚೀಟಿಯನ್ನು ನೀಡಬೇಕು. ಇಲಾಖೆ ಕೆಲಸ ಬಿಟ್ಟು ಬೇರೆ ಇಲಾಖೆಯ ಕೆಲಸ ನೀಡಬಾರದು. ಒಕ್ಕೂಟದ ಕಚೇರಿಗೆ ಕಂಪ್ಯೂಟರ್, ಪ್ರಿಂಟರ್ ಮತ್ತು ಪ್ರತಿ ಗ್ರಾಪಂಗಳಿಗೆ ಒಂದು ಟ್ಯಾಬ್ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕುಂದಾಪುರ ತಾಲೂಕು ಕಾರ್ಯದರ್ಶಿ ಸುಚಿತ್ರಾ, ಕೋಶಾಧಿಕಾರಿ ಪ್ರಮೀಳಾ, ಹೆಬ್ರಿ ತಾಲೂಕು ಅಧ್ಯಕ್ಷೆ ಪಿ.ಸುಜಾತ, ಉಡುಪಿ ತಾಲೂಕು ಅಧ್ಯಕ್ಷೆ ಸುಜಾತ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!