ಇಂದಿನ ಶಿಕ್ಷಣ ನಿರುದ್ಯೋಗಿಗಳನ್ನು ನಿರ್ಮಾಣ ಮಾಡುತ್ತಿದೆ, ಕೇವಲ ಸರ್ಟಿಫಿಕೇಟ್ ನೀಡುವುದು ಶಿಕ್ಷಣದ ಕೆಲಸವಲ್ಲ- ಸಿಟಿ ರವಿ

ಉಡುಪಿ, ನ.19: ಸಿದ್ಧರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರ ಏಕಾಏಕಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯನ್ನು ರದ್ದುಪಡಿಸಿದ್ದು, ಅದರ ಬದಲು ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ)ಯನ್ನು ರೂಪಿಸಲು ಸಮಿತಿ ಯೊಂದನ್ನು ರಚಿಸಿದೆ. ಸರಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಲು ಆಗ್ರಹಿಸಿ, ನಮಗೆ ಎನ್‌ಇಪಿಯೇ ಬೇಕೆಂಬ ಭಾವನೆಯನ್ನು ವ್ಯಕ್ತಪಡಿಸಲು ನ.15ರಿಂದ 30ರವರೆಗೆ ತಜ್ಞರ, ವಿದ್ಯಾರ್ಥಿಗಳ ಹೆತ್ತವರ, ವಿದ್ಯಾರ್ಥಿಗಳ ಹಾಗೂ ನಾಗರಿಕರ ಒಂದು ಕೋಟಿ ಸಹ ಸಂಗ್ರಹ ಅಭಿಯಾನ ನಡೆಯಲಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.

ಉಡುಪಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ದೇಶಾದ್ಯಂತ ಅನುಷ್ಠಾನಗೊಂಡಿರುವ ಎನ್‌ಇಪಿ ಯನ್ನು ರದ್ದುಪಡಿಸುವುದರಿಂದ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಹಿನ್ನಡೆಯಾಗುತ್ತದೆ. ಎನ್‌ಇಪಿ ರಚನೆಯ ಸಂದರ್ಭದಲ್ಲಿ ಕಾಂಗ್ರೆಸ್ ಅದನ್ನು ಬೆಂಬಲಿಸಿತ್ತು. ಇದೀಗ ಏಕಾಏಕಿ ಅದನ್ನು ವಿರೋಧಿಸಿ, ರದ್ದುಪಡಿಸುವ ಮೂಲಕ ರಾಜಕೀಯ ಮಾಡುತ್ತಿದೆ ಎಂದು ರವಿ ಆರೋಪಿಸಿದರು.

ಶಿಕ್ಷಣ ಎಂಬುದು ರಾಜಕೀಯ ಮಾಡುವ ಕ್ಷೇತ್ರವಲ್ಲ. ಶಿಕ್ಷಣ ದೇಶ ಕಟ್ಟುವ ಮಾಧ್ಯಮ. ಭವಿಷ್ಯದ ಸವಾಲು ಎದುರಿಸಲೇ ಬೇಕಾದ ಜ್ಞಾನವನ್ನು ಶಿಕ್ಷಣ ನೀಡಬೇಕು. ರಾಷ್ಟ್ರೀಯ, ಸಾಮಾಜಿಕ ಪ್ರಜ್ಞೆಯನ್ನು ಶಿಕ್ಷಣ ರೂಪಿಸ ಬೇಕು. ಸ್ವಾಭಿಮಾನಿ, ಸ್ವಾವಲಂಬಿ ಆಗದ ಜನಾಂಗದಿಂದ ಆತ್ಮ ನಿರ್ಭರ ಭಾರತ ಸಾಧ್ಯವಿಲ್ಲ. ಹಿಂದೆ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ರಾಷ್ಟ್ರೀಯ ನೀತಿಗೆ ಪೂರಕ ಅಭಿಪ್ರಾಯ ನೀಡಿತ್ತು. ಈಗ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವುದಿಲ್ಲ ಎಂದು ಹಠಮಾರಿ ಧೋರಣೆ ತೋರುತ್ತಿದೆ ಎಂದವರು ಆರೋಪಿಸಿದರು.

ಶಿಕ್ಷಣ ನೀತಿ ರಾಜಕೀಯ ಮಾಡುವ ಕ್ಷೇತ್ರವಲ್ಲ. ಎನ್‌ಇಪಿಯಲ್ಲಿ ದೋಷಗಳಿದ್ದರೆ ಹೇಳಿ, ಸರಿಪಡಿಸಬಹುದು. ಕಾಂಗ್ರೆಸ್‌ ನಂತ ಹಿರಿಯ ಪಕ್ಷ ಮಾಡುವ ಕೆಲಸ ಇದಲ್ಲ. ಕಾಂಗ್ರೆಸ್ ವಿರೋಧಿಸುತ್ತಿರು ವುದು ಏನನ್ನು. ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ನಿಮ್ಮ ವಿರೋಧವಾ, ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಪಡೆಯಲು ನಿಮ್ಮ ವಿರೋಧವಾ? ಎಂದವರು ಪ್ರಶ್ನಿಸಿದರು.

ಇಂದಿನ ಶಿಕ್ಷಣ ನಿರುದ್ಯೋಗಿಗಳನ್ನು ನಿರ್ಮಾಣ ಮಾಡುತ್ತಿದೆ. ಕೇವಲ ಸರ್ಟಿಫಿಕೇಟ್ ನೀಡುವುದು ಶಿಕ್ಷಣದ ಕೆಲಸವಲ್ಲ. ಕೌಶಲ್ಯದ ತರಬೇತಿ ನೀಡುವುದು ಅಪರಾಧವಾ? ಎಂಬೆಲ್ಲಾ ಅನುಮಾನಗಳು ಮೂಡುತ್ತವೆ. ಬಡ ಮಕ್ಕಳನ್ನು ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಂಚಿಸಬೇಡಿ. ಡಿಕೆಶಿ, ಎಂಬಿ ಪಾಟೀಲ್, ಪರಮೇಶ್ವರ ನಡೆಸುವ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಇದೆ. ಆದರೆ ಬಡ ಮಕ್ಕಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಬೇಡವೆಂಬುದು ನಿಮ್ಮ ಧೋರಣೆಯೇ ಎಂದು ರವಿ ನುಡಿದರು.

ರಾಜ್ಯ ಸರಕಾರ, ಕರ್ನಾಟಕವನ್ನು ರಿವರ್ಸ್ ಗೇರ್‌ನಲ್ಲಿ ತೆಗೆದುಕೊಂಡು ಹೋಗುತ್ತಿದೆ ಆಕ್ರಮಣಕಾರಿಗಳನ್ನು ವೈಭವೀಕರಿ ಸುವುದು ಹೆಮ್ಮೆಯ ಸಂಗತಿಯಲ್ಲ. ಪ್ರಾಚೀನ ಜ್ಞಾನದ ಬಗ್ಗೆ ಇವತ್ತಿನ ಶಿಕ್ಷಣದಲ್ಲಿ ಯಾವುದೇ ಮಾಹಿತಿ ಇಲ್ಲ. ಕೇವಲ ಅಲೆಕ್ಸಾಂಡರ್, ಅಕ್ಬರ್ ದಿ ಗ್ರೇಟ್ ಎಂಬ ಮನಸ್ಥಿತಿಯಲ್ಲಿ ಇದ್ದೀರಿ. ಪೂರ್ವಿಕರ ಸಾಧನೆಗೆ ಹೆಮ್ಮೆ ಪಡೋಣ, ಕೀಳರಿಮೆ ಬೇಡ ಎಂದು ರವಿ, ರಾಜ್ಯಸರಕಾರಕ್ಕೆ ಸಲಹೆ ನೀಡಿದರು.

ವಿಜಯೇಂದ್ರಗೆ ಪಟ್ಟ- ಚರ್ಚೆ ಬೇಡ: ಕಾಂಗ್ರೆಸನ್ನು ಟೀಕಿಸುತ್ತಿದ್ದ ಬಿಜೆಪಿಯಲ್ಲೂ ಅಪ್ಪ ಮಕ್ಕಳ ರಾಜ್ಯಭಾರದ ವಿಚಾರದ ಕುರಿತು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಪ್ರಧಾನಿಯನ್ನು ಒಳಗೊಂಡ ವರಿಷ್ಠರು ಈ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ. ಸಂಸದೀಯ ಸಮಿತಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.

ಇನ್ನಷ್ಟು ಪ್ರಶ್ನಿಸಿದಾಗ, ಇಂತಹ ಪ್ರಶ್ನೆಗಳು ಕೇಳಿ ಬರುವುದು ನಿಜ. ಈ ಬಗ್ಗೆ ನಾನು ಈ ಸಂದರ್ಭದಲ್ಲಿ ಚರ್ಚೆ ಮಾಡುವುದಿಲ್ಲ. ಚರ್ಚಿಸಲು ಹೊರಟರೆ ಬೇರೆ ಬೇರೆ ಅರ್ಥಗಳು ಹುಟ್ಟಿಕೊಳ್ಳುತ್ತದೆ. ಹೊಸ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷ ಸದೃಢವಾಗಿ ಬೆಳೆಯಲಿ ಎಂದು ಸುಮ್ಮನಾದರು.

ಆಕಾಂಕ್ಷಿ ನಾನಲ್ಲ: ಉಡುಪಿ ಚಿಕ್ಕಮಗಳೂರಿಗೆ ನೀವು ಎಂಪಿ ಚುನಾವಣೆ ಆಕಾಂಕ್ಷಿನಾ? ಎಂದು ಕೆಣಕಿದಾಗ, ನಾನು 1994ರ ನಂತರ ಯಾವುದೇ ಸ್ಥಾನ ಕೇಳಿ ಪಡೆದಿಲ್ಲ. ನಾನು ಆಕಾಂಕ್ಷಿಯಲ್ಲ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಪಕ್ಷದ ಗೆಲುವಿಗೆ ಶಕ್ತಿಮೀರಿ ಶ್ರಮ ಹಾಕುತ್ತೇನೆ ಎಂದರು.

Leave a Reply

Your email address will not be published. Required fields are marked *

error: Content is protected !!