ಪುತ್ತೂರು: ಬಜರಂಗದಳ ಐವರು ಕಾರ್ಯಕರ್ತರಿಗೆ ಗಡೀಪಾರು ನೋಟೀಸ್

ಪುತ್ತೂರು: ಅನೈತಿಕ ಪೊಲೀಸ್ ಗಿರಿಯಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಐವರು ಬಜರಂಗದಳದ ಕಾರ್ಯಕರ್ತರಿಗೆ ಪೊಲೀಸ್ ಇಲಾಖೆ ಗಡೀಪಾರು ಶಿಫಾರಸ್ಸಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದ್ದು, ನ.22ರಂದು ಪುತ್ತೂರು ಸಹಾಯಕ ಆಯುಕ್ತರ ಮುಂಭಾಗದಲ್ಲಿ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಬಜರಂಗದಳ ಕಾರ್ಯಕರ್ತರಾದ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ನಿವಾಸಿ, ಅಟೋ ರಿಕ್ಷಾ ಚಾಲಕ ದಿನೇಶ್, ಎಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿರುವ ಆರ್ಯಾಪು ಗ್ರಾಮದ ಸಂಪ್ಯ ನಿವಾಸಿ ಪ್ರಜ್ವಲ್, ಲತೇಶ್ ಗುಂಡ್ಯ, ತಿಂಗಳಾಡಿ ನಿವಾಸಿ ನಿಶಾಂತ್ ಮತ್ತು ಅಜಲಡ್ಕ ನಿವಾಸಿ ಪ್ರದೀಪ್ ಆರೋಪಿಗಳು.

ಈ ಪೈಕಿ ಲತೇಶ್ ಗುಂಡ್ಯ ಬಜರಂಗದಳದ ಪುತ್ತೂರು ಜಿಲ್ಲಾ ಸಹ ಸಂಯೋಜಕ್ ಆಗಿದ್ದು, ಆರೋಪಿಗಳ ವಿರುದ್ಧ ಕೋಮು ಗಲಭೆ, ದನ ಸಾಗಾಟ ಹಲ್ಲೆ, ಅನೈತಿಕ ಪೊಲೀಸ್ ಗಿರಿ ಸೇರಿ ಪ್ರಕರಣಗಳಲ್ಲಿ ಭಾಗಿಯಾದ ಆರೋಪವಿದೆ. ಪುತ್ತೂರು ನಗರ ಠಾಣೆ ಹಾಗೂ ಸುಳ್ಯ ಠಾಣೆಯಿಂದ ಗಡೀಪಾರಿಗೆ ಮನವಿ ಮಾಡಲಾಗಿದ್ದು, ಲತೇಶ್‍ಗೆ ಬಳ್ಳಾರಿ ಜಿಲ್ಲೆಗೆ, ಪ್ರಜ್ವಲ್ ಗೆ ಬಾಗಲಕೋಟೆ ಜಿಲ್ಲೆಗೆ ಗಡೀಪಾರು ಮಾಡಲು ಮನವಿ ಮಾಡಲಾಗಿದೆ.

ಕರ್ನಾಟಕ ಪೊಲೀಸ್ ಅಧಿನಿಯಮ 1953ರ ಕಲಂ 55ರಡಿ ಗಡೀಪಾರು ನೋಟೀಸ್ ನೀಡಲಾಗಿದ್ದು, ನಿಮ್ಮನ್ನು ಯಾಕೆ ಗಡೀಪಾರು ಮಾಡಬಾರದು ಎಂದು ಆರೋಪಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಲಾದೆ ಹಾಗೂ ಪುತ್ತೂರು ಸಹಾಯಕ ಆಯುಕ್ತರ ಎದುರು ಹಾಜರಾಗಲು ಸೂಚನೆ ನೀಡಲಾಗಿದೆ. ವಿಚಾರಣೆಗೆ ಹಾಜರಾದ ಬಳಿಕ ಅಧಿಕೃತವಾಗಿ ಒಂದು ವರ್ಷಗಳ ಕಾಲ ಗಡೀಪಾರು ಆದೇಶ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಸರ್ಕಾರದಿಂದ ಹಿಂದುತ್ವ ಕಾರ್ಯಕರ್ತರ ಮೇಲೆ ಗಡೀಪಾರಿನ ಅಸ್ತ್ರ ಪ್ರಯೋಗ-ನಳಿನ್ ಕುಮಾರ್ ಕಟೀಲ್

ರಾಜ್ಯದಲ್ಲಿ ಹಿಂದುತ್ವ ಸಂಘಟನೆಯ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವ ಕೆಲಸ ನಡೆಸುತ್ತಿರುವ ರಾಜ್ಯ ಸರ್ಕಾರವು ಗೂಂಡಾರಾಜ್ಯವಾಗಿ ಬದಲಾಗಿದೆ. ಯಾವುದೇ ಅಪರಾಧವಿಲ್ಲದಿದ್ದರೂ ಇದೀಗ ಸುಳ್ಯ ಹಾಗೂ ಪುತ್ತೂರು ಭಾಗದ ಕಾರ್ಯಕರ್ತರ ಮೇಲೆ ಗಡೀಪಾರಿನ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲೆಯ ಸಂಸದ ಹಾಗೂ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!