ಒಂದೇ ಕುಟುಂಬದ ನಾಲ್ವರ ಕಗ್ಗೊಲೆ: ಸರಕಾರ ಎಚ್ಚೆತ್ತುಕೊಳ್ಳುವುದು ಯಾವಾಗ- ದಾವೂದ್
ಉಡುಪಿ: ನೇಜಾರು ಕೆಮ್ಮಣ್ಣು ರಸ್ತೆಯ ತೃಪ್ತಿ ಲೇ ಔಟ್ ನಲ್ಲಿ ರವಿವಾರ ನಡೆದಿರುವ ತಾಯಿ ಮತ್ತು ಮೂವರ ಮಕ್ಕಳ ಭಯಾನಕ ಹತ್ಯೆ ಘಟನೆಯಿಂದ ಹಬ್ಬದ ಸಂಭ್ರಮದ ವಾತಾವರಣದಲ್ಲಿದ್ದ ಕರಾವಳಿಯ ಜನರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಸರಕಾರ ಆರೋಪಿಯ ಬಂಧಿಸಿ, ನೊಂದ ಕುಟುಂಬಕ್ಕೆ ತಕ್ಷಣ ನ್ಯಾಯ ಒದಗಿಸಿ ಕೊಡಬೇಕು ಎಂದು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಉಡುಪಿ ಜಿಲ್ಲಾಧ್ಯಕ್ಷ ದಾವೂದ್ ಅಬೂಬಕ್ಕರ್ ಆಗ್ರಹಿಸಿದ್ದಾರೆ.
ಇಂತಹದೊಂದು ಭೀಕರ ಹತ್ಯಾಕಾಂಡ ಬಗ್ಗೆ ಬೇರೆ ರಾಜ್ಯಗಳಲ್ಲಿ ಕೇಳಿದ್ದು, ಕಾಂಗ್ರೆಸ್ ಸರಕಾರ ಬಂದ ಕೂಡಲೇ ನಮ್ಮರಾಜ್ಯದಲ್ಲೂ ಇಂತಹ ಅಮಾನುಷ ಹತ್ಯೆ ಆಗಿರುವುದನ್ನು ಕೇಳಿ ಬಹಳ ದಿಗ್ಬ್ರಮೆಯಾಗಿದೆ.
ಘಟನೆ ನಡೆದು ಎರಡು ದಿನ ಕಳೆದರೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್‌ಕರ್ ಸುಳಿವಿಲ್ಲ
ತಾಯಿ, ಆಕೆಯ ಇಬ್ಬರು ಹೆಣ್ಣು ಮಕ್ಕಳು ಮತ್ತು ಪುಟ್ಟ ಮಗನನ್ನು ಹಾಡಹಗಲಲ್ಲೇ ಅವರ ಮನೆಗೇ ನುಗ್ಗಿ ಕೇವಲ ಹತ್ತಿಪ್ಪತ್ತು ನಿಮಿಷಗಳಲ್ಲಿ ಕೊಂದ ಹಂತಕ ಯಾವುದೇ ಭಯವಿಲ್ಲದೆ ನಗರದಲ್ಲಿ ಹೋಗುತ್ತಿರುವುದು ನೋಡಿದರೆ ಸಾಮಾನ್ಯ ಜನರು ಜೀವ ಕೈಯಿಂದ ಹಿಡಿದು ಬದುಕುವ ಪರಿಸ್ಥಿತಿ ಬಂದಿದೆ.
ಹತ್ಯೆ ನಡೆದು ಎರಡು ದಿನವಾದರೂ ಹಂತಕನ ಸುಳಿವು ಸಿಕ್ಕಿಲ್ಲ, ಬಂಧನವೂ ಆಗಿಲ್ಲ. ಹಂತಕ ಕೊಲೆ ಮಡಿದ ಬಳಿಕ ಆತನನ್ನು ಕರೆದುಕೊಂಡು ಹೋಗಿದ್ದಾನೆ ಎನ್ನಲಾದ ಬೈಕ್ ಸವಾರನ ಬಗ್ಗೆಯೂ ಯಾವುದೇ ಸುಳಿವುಲಭ್ಯವಿಲ್ಲ. ಇದು ಜನರಲ್ಲಿ ಇನ್ನಷ್ಟು ಭೀತಿ ಸೃಷ್ಟಿಸಿದೆ. ಜೊತೆಗೆ ಜನರಲ್ಲಿ ನಾನಾ ಪ್ರಶ್ನೆಗಳನ್ನು ಸೃಷ್ಟಿಸಿದೆ. ಉಡುಪಿ ಪೊಲೀಸರು ಈ ದುರಂತದ ತನಿಖೆಯನ್ನು ಚುರುಕುಗೊಳಿಸಬೇಕು. ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡು ನಿಷ್ಪಕ್ಷ ಹಾಗು ಕ್ಷಿಪ್ರ ತನಿಖೆ ನಡೆಸಿ ಹಂತಕ ಹಾಗು ಆತನ ಹಿಂದಿರುವ ಸೂತ್ರಧಾರಿಗಳನ್ನು ಆದಷ್ಟು ಶೀಘ್ರ ಬಂಧಿಸಿ ಕಾನೂನು ಪ್ರಕಾರ ಅತ್ಯಂತ ಗರಿಷ್ಟ ಶಿಕ್ಷೆ ಕೊಡಿಸಬೇಕು.
ಇನ್ನು ಇಷ್ಟು ದೊಡ್ಡ ಘಟನೆಯ ಬಗ್ಗೆ ರಾಜ್ಯ ಸರಕಾರ ಯಾವುದೇ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಂತೂ ಈವರೆಗೆ ಸಂತ್ರಸ್ತರ ಮನೆಗೆ ಭೇಟಿ ಕೊಟ್ಟಿಲ್ಲ ಕನಿಷ್ಠ ಒಂದು ಹೇಳಿಕೆಯನ್ನೂ ಬಿಡುಗಡೆ ಮಾಡಿಲ್ಲ. ಜನರಿಂದ ವ್ಯಾಪಕ ಅಸಮಾಧಾನ ವ್ಯಕ್ತವಾಗಿ, ಮಾಧ್ಯಮಗಳಲ್ಲಿ ಸುದ್ದಿಯಾದ ಮೇಲೆಯೇ ಉಸ್ತುವಾರಿ ಸಚಿವರು ಪೊಲೀಸರಿಗೆ ಮಾತನಾಡಿ ಸೂಚನೆ ನೀಡಿದ್ದಾರೆ ಎಂಬ ಹೇಳಿಕೆ ಬಂದಿದೆ.
ಹತ್ಯಾಕಾಂಡ ನಡೆದಿರುವ ನೇಜಾರು, ಕೆಮ್ಮಣ್ಣು ಪ್ರದೇಶದಲ್ಲಿ ಹೆಚ್ಚಿನವರು ವಿದೇಶಗಳಲ್ಲಿ ದುಡಿಯುತ್ತಿರುವವರು. ಅಲ್ಲಿ ಹೆಚ್ಚಿನ ಮನೆಗಳಲ್ಲಿ ಮಹಿಳೆಯರು, ಮಕ್ಕಳೇ ವಾಸಿಸುತ್ತಿದ್ದು ಈ ಕಗ್ಗೊಲೆ ಜನತೆಯನ್ನು ಭಯಬೀತಗೊಳಿಸಿದೆ.
ಸರ್ಕಾರವು ತಕ್ಷಣ ಸಂತ್ರಸ್ತ ಕುಟುಂಬದ ಸದಸ್ಯರನ್ನು ಹಾಗು ಪ್ರದೇಶದ ಜನರನ್ನು ಭೇಟಿಯಾಗಿ ಅವರಿಗೆ ಸ್ಥೈರ್ಯ ತುಂಬಬೇಕಾಗಿದೆ. ಇದು ಸರಕಾರದ ಆದ್ಯ ಕರ್ತವ್ಯ. ತಕ್ಷಣ ಈ ಕೆಲಸ ಆಗಬೇಕಾಗಿದೆಂದು ಅಬೂಬಕ್ಕರ್ ಆಗ್ರಹಿಸಿದ್ದಾರೆ.