ಗೋ ಆಧಾರಿತ ಕೃಷಿ ಪದ್ಧತಿಯಿಂದ ಆರೋಗ್ಯ, ಭಾರತೀಯ ಸಂಸ್ಕೃತಿ ರಕ್ಷಿಸಲು ಸಾಧ್ಯ- ಡಾ.ರಾಮಕೃಷ್ಣ ಆಚಾರ್ಯ

ಕಾರ್ಕಳ : ಗೋ ಆಧಾರಿತ ಕೃಷಿ ಪದ್ಧತಿಯಿಂದ ಆರೋಗ್ಯವನ್ನೂ, ಅಪಾರ ಸಂಪತ್ತನ್ನು ಜೊತೆಗೆ ಭಾರತೀಯ ಸಂಸ್ಕೃತಿಯನ್ನು ರಕ್ಷಿಸಿಕೊಳ್ಳಲು ಸಾಧ್ಯ ಎಂದು ಮೂಡಬಿದಿರೆ ಎಸ್.ಕೆ.ಎಫ್ ನ ಡಾ. ರಾಮಕೃಷ್ಣ ಆಚಾರ್ಯ ಅವರು ತಿಳಿಸಿದರು.

ಬಜಗೋಳಿಯ ರವೀಂದ್ರ ಶೆಟ್ಟಿ ಅವರ ಮನೆಯಲ್ಲಿ ಗೋ ಪೂಜೆ ಹಾಗೂ ಗೋದಾನದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ನಮ್ಮ ದೇಶದಲ್ಲಿ ಹೆಚ್ಚೆಚ್ಚು ಆಹಾರ ಬೆಳೆಯಲು ವಿದೇಶಿ ತಂತ್ರಜ್ಞಾನ ಆಧಾರಿತ ರಾಸಾಯನಿಕ ಬಳಕೆಯ ಕೃಷಿಯನ್ನು ಬರ ಮಾಡಿಕೊಂಡೆವು. ಜೊತೆಗೆ ರೋಗಗಳನ್ನೂ ಬೆಳೆಸಿಕೊಂಡಿದ್ದೇವೆ. ಆರ್ಥಿಕ ಬಲವೃದ್ಧಿಗೆ ಗೋ ಸಾಕಾಣಿಕೆಯನ್ನು ಮೀರಿಸುವ ಅನ್ಯ ಕ್ಷೇತ್ರಗಳಿಲ್ಲ. ನಮ್ಮ ದೇಶ ಅಭಿವೃದ್ಧಿ ಹೊಂದಲು ಮೊದಲು ಜಾನುವಾರು ಸಾಕಣೆ, ಎರಡನೇದಾಗಿ ಗಿಡಗಳ ಪೋಷಣೆ ಹಾಗೂ ಪ್ಲಾಸ್ಟಿಕ್ ನ್ನು ತ್ಯಾಜ್ಯ ಈ ಮೂರನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದರು.

ಶ್ರೀಕಾಂತ ಶೆಟ್ಟಿ ಅವರು ವಿಶೇಷ ಉಪನ್ಯಾಸ ನೀಡಿ ದೇಶಿ ತಳಿಯ ಗೋವಿನ ರಕ್ಷಣೆಯ ಚಿಂತನೆ ಅಗತ್ಯವಾಗಿ ನಡೆಯಬೇಕಾಗಿದೆ. ಗ್ರಾಮೀಣ ಜನರಿಗೆ ದೀಪಾವಳಿ ಆರ್ಥಿಕತೆಯ ಭದ್ರತೆ ಯನ್ನು ನೀಡಿದರೆ, ನಗರದ ಮಂದಿಗೆ ದೀವಾಳಿಯೆನಿಸಲಿದೆ ಎಂದರು.

ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಮಾತನಾಡಿ ಶುಭ ಹಾರೈಸಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರನ್ನು ಹೈನುಗಾರರನ್ನು, ಪುರಸ್ಕೃತ ಶಿಕ್ಷಕಿ ವಂದನಾ ರೈ ಮೊದಲಾದವರನ್ನು ಗೌರವಿಸಲಾಯಿತು.

ಗಣೇಶ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ರತ್ನಾಕರ ಅಮೀನ್, ಮುಡಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರುತಿ ಡಿ ಅಧಿಕಾರಿ, ನಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ಪೂಜಾರಿ, ವಕೀಲ ಸುನಿಲ್ ಕುಮಾರ್ ಶೆಟ್ಟಿ, ಸುನಿಲ್ ಕೆ ಆರ್ ಉಪಸ್ಥಿತರಿದ್ದರು.

ನಲ್ಲೂರು ಶಿಕ್ಷಕ ನಾಗೇಶ್ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!