ಬಡಗಬೆಟ್ಟು ಕ್ರೆ.ಕೋ ಆ. ಸೊಸೈಟಿ: ಶೇ15 ಡಿವಿಡೆಂಡ್ ಘೋಷಣೆ

ಉಡುಪಿ, ಸೆ.18: ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 2022-23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಲಾಗಿದೆ.

ಉಡುಪಿ ಪುರಭವನದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ ಸಂಜೀವ ಕಾಂಚನ್ ವಾರ್ಷಿಕ ವರದಿ ಮತ್ತು ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು. ವರದಿ ಸಾಲಿನ ಅಂತ್ಯಕ್ಕೆ ಸಂಘವು ಒಟ್ಟು 20,147 ಸದಸ್ಯ ರಿಂದ 4.75 ಕೋಟಿ ಪಾಲು ಬಂಡವಾಳ ಹಾಗೂ 451.43ಕೋಟಿ ಠೇವಣಿ ಹೊಂದಿದೆ. 338.01 ಕೋಟಿ ಹೊರಬಾಕಿ ಸಾಲ ಹೊಂದಿದ್ದು, ಸಂಘವು 2022-23 ನೇ ಸಾಲಿನಲ್ಲಿ ಸುಮಾರು 2330 ಕೋಟಿ ವಾರ್ಷಿಕ ವಹಿವಾಟು ನಡೆಸಿದೆ. ಸಂಘವು 14.01ಕೋಟಿ ನಿವ್ವಳ ಲಾಭವನ್ನು ಗಳಿಸಿದೆ ಎಂದರು.

ಬಳಿಕ ನಡೆದ ಸಮಾರಂಭದಲ್ಲಿ ಸೊಸೈಟಿಯ ಚೇತನಾ ಮೊಬೈಲ್ ಆ್ಯಪ್, ಪೇ-ಡೈರೆಕ್ಟ್ ಎಟಿಎಂ ಕಾರ್ಡ್, ಪಿಗ್ಮಿ ಕಲೆಕ್ಷನ್ ಮೊಬೈಲ್ ಆ್ಯಪ್ ಅನಾವರಣ ಕಾರ್ಯಕ್ರಮ ನಡೆಯಿತು.

ಚೇತನಾ ಮೊಬೈಲ್ ಆ್ಯಪ್‌ನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪೇ ಡೈರೆಕ್ಟ್ ಎಟಿಎಂ ಕಾರ್ಡ್‌ನ್ನು ಮಾಜಿ ಶಾಸಕ ರಘುಪತಿ ಭಟ್, ಪಿಗ್ಮಿ ಕಲೆಕ್ಷನ್ ಆ್ಯಪ್‌ ನ್ನು ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅನಾವರಣಗೊಳಿಸಿದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಐಸಿಐಸಿಐ ಬ್ಯಾಂಕ್‌ನ ಡೆಪ್ಯುಟಿ ಜನರಲ್ ಮೆನೇಜರ್ ಅಭಿತಾಬ್ ದೀಕ್ಷಿತ್, ಸೊಸೈಟಿಯ ಶತಮಾನೋತ್ಸವ ಸಮಿತಿಯ ಸಂಚಾಲಕ ಪುರುಷೋತ್ತಮ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಕ್ರೆಡೈ ಅಧ್ಯಕ್ಷ ಮನೋಹರ್ ಶೆಟ್ಟಿ, ಜೀವ ರಕ್ಷಕ ಈಶ್ವರ್ ಮಲ್ಪೆ, ಯೋಗಪಟು ತನುಶ್ರೀ ಪಿತ್ರೋಡಿ ಅವರನ್ನು ಸನ್ಮಾನಿಸ ಲಾಯಿತು.

ಕೋಡ್‌ಲಾಗ್ಸ್ ಟೆಕ್ನಾಲಜೀಸ್ ವ್ಯವಸ್ಥಾಪಕ ಶ್ರವಣ್ ರವಿರಾಜ್ ಮೊಬೈಲ್ ಆ್ಯಪ್ ಮತ್ತು ಐಸಿಐಸಿಐ ಬ್ಯಾಂಕಿನ ಹಿರಿಯ ಮುಖ್ಯ ವ್ಯವಸ್ಥಾಪಕ ಮಂಜುನಾಥ್ ಎಟಿಎಂ ಕುರಿತು ಮಾಹಿತಿ ನೀಡಿದರು. ಸೊಸೈಟಿ ಪ್ರಾಯೋಜಕ ತ್ವದಲ್ಲಿ ಚೇತನಾ ನವೋದಯ ಸ್ವಸಹಾಯ ಗುಂಪುಗಳ ಅನಾವರಣವು ಗುಂಪಿನ ಪ್ರೇಕರ ಹರಿನಾಥ್ ಉಪಸ್ಥಿತಿಯಲ್ಲಿ ನಡೆಯಿತು.

ಸಂಘದ ಆಡಳಿತ ಮಂಡಳಿ ಸದಸ್ಯರಾದ ಹಾಜಿ ಸಯ್ಯದ್ ಅಬ್ದುಲ್ ರಜಾಕ್, ವಸಂತ ಕೆ.ಕಾಮತ್, ವಿನಯ ಕುಮಾರ್ ಟಿ.ಎ.,ಜಯಾನಂದ ಸಿ.ಮೈಂದನ್, ಪದ್ಮನಾಭ ಕೆ.ನಾಯಕ್, ರಘುರಾಮ ಎಸ್.ಶೆಟ್ಟಿ, ಜಾರ್ಜ್ ಸ್ಯಾಮುವೆಲ್, ಸದಾಶಿವ ನಾಯ್ಕ್, ಜಯ ಶೆಟ್ಟಿ, ಗಾಯತ್ರಿ ಎಸ್. ಭಟ್ ಉಪಸ್ಥಿತರಿದ್ದರು.

ಸೊಸೈಟಿ ಅಧ್ಯಕ್ಷ ಸಂಜೀವ ಕಾಂಚನ್ ಸ್ವಾಗತಿಸಿದರು. ಪ್ರಭಾರ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್ ವಂದಿಸಿದರು. ಶಾಖಾ ವ್ಯವಸ್ಥಾಪಕ ನವೀನ್ ಕೆ. ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!