ಬಿಜೆಪಿ-ಜೆಡಿಎಸ್ ಮೈತ್ರಿಗೆ ರಾಜ್ಯ ನಾಯಕರ ಬ್ರೇಕ್? ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಬಿಎಸ್ವೈ ಲಾಬಿ
ಬೆಂಗಳೂರು: 2024ರ ಲೋಕಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಬಿಜೆಪಿಯಲ್ಲಿ ಭಾನುವಾರ ಗೊಂದಲ ಸೃಷ್ಟಿಯಾಗಿದೆ.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಜೆಡಿಎಸ್ ಮುಖಂಡ ಎಚ್‌ಡಿ ದೇವೇಗೌಡ ಭೇಟಿ ಮಾಡಿದ್ದರು, ಮೈತ್ರಿ ಒಪ್ಪಂದಕ್ಕೆ ಮುದ್ರೆ ಬಿದ್ದಿರುವುದನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಖಚಿತ ಪಡಿಸಿದ್ದರು. ಆದರೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿಲ್ಲ ಎಂದು ಹೇಳುವ ಮೂಲಕ ಯಡಿಯೂರಪ್ಪ ಯೂಟರ್ನ್ ಹೊಡೆದಿದ್ದರು.
“ಮೋದಿ ಬೇರೆ ಕೆಲಸಗಳಲ್ಲಿ ನಿರತರಾಗಿದ್ದರು. ಬಹುಶಃ ನಾಳೆ ಅಥವಾ ಮರುದಿನ ಮಾತುಕತೆ ನಡೆಯಲಿದೆ. ಇದುವರೆಗೆ ಯಾವುದೇ ಚರ್ಚೆ ನಡೆದಿಲ್ಲ, ಕಾದು ನೋಡುತ್ತೇವೆ. ನಾನು ಮೊದಲೇ ಹೇಳಿದಂತೆ ಮೈತ್ರಿ ರೂಪುಗೊಂಡಿಲ್ಲ, ಈಗ ಕೂಡ ಮೈತ್ರಿಯ ಕಲ್ಪನೆಯು ಯಾವುದೇ ಆಕಾರವನ್ನು ಪಡೆದಿಲ್ಲ. ಎಲ್ಲವನ್ನೂ ಮೋದಿ ಮತ್ತು ಶಾ ನಿರ್ಧರಿಸುತ್ತಾರೆ ಎಂದ ಯಡಿಯೂರಪ್ಪ ಬಾಂಬ್ ಸಿಡಿಸಿದ್ದರು.
ಜೆಡಿಎಸ್‌ಗೆ ನಾಲ್ಕು ಸ್ಥಾನಗಳನ್ನು ಬಿಟ್ಟುಕೊಡಲು ಅಮಿತ್ ಶಾ ಒಪ್ಪಿಕೊಂಡಿದ್ದಾರೆ ಎಂದು ಯಡಿಯೂರಪ್ಪ ಈ ಹಿಂದೆ ಹೇಳಿದ್ದರು ಮತ್ತು ಮೈತ್ರಿಕೂಟವು 25-26 ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡುತ್ತದೆ ಎಂದು ಸಂತೋಷ ವ್ಯಕ್ತಪಡಿಸಿದರು. ಬಿಜೆಪಿ ಈಗಾಗಲೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದೆ ಮತ್ತು ಈ ಸಂಬಂಧ ಆರ್‌ಎಸ್‌ಎಸ್ ಸಲಹೆ ಪಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ, ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರ ಒಪ್ಪಿಗೆಯನ್ನು ಮೈತ್ರಿಗೆ ತೆಗೆದುಕೊಳ್ಳಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ರಾಜ್ಯ ಮತ್ತು ಕೇಂದ್ರ ಪಕ್ಷದ ನಾಯಕರ ನಡುವೆ ಸಂವಹನ ಕೊರತೆಯಿಂದಾಗಿ ಗೊಂದಲವಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಕೂಡ ಮೈತ್ರಿ ಬಗ್ಗೆ ಹೇಳುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ರಾಷ್ಟ್ರೀಯ ನಾಯಕತ್ವವು ರಾಜ್ಯ ನಾಯಕರ ಮೇಲೆ ಅವಲಂಬಿತವಾಗಿಲ್ಲ, ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಗೆ ಅಗತ್ಯವಿರುವ ತಂತ್ರವನ್ನು ರೂಪಿಸುತ್ತಿದೆ. ಉತ್ತರ ಕರ್ನಾಟಕ ಮತ್ತು ದಕ್ಷಿಣದ ಕೆಲವು ಆಯ್ದ ಭಾಗಗಳಲ್ಲಿ ಸೀಟು ಹಂಚಿಕೆ ಈ ಮೈತ್ರಿಯ ಭಾಗವಾಗಿದೆ. ಹಳೇ ಮೈಸೂರಿನಲ್ಲಿ ಒಬ್ಬರು ಅಥವಾ ಇಬ್ಬರು ಬಿಜೆಪಿ ನಾಯಕರನ್ನು ಜೆಡಿಎಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿಸುವುದು ತಂತ್ರದ ಭಾಗವಾಗಿದೆ, ಇದಕ್ಕೆ ಬಿಜೆಪಿಯೊಳಗಿನ ಒಂದು ವರ್ಗದಿಂದ ವಿರೋಧವಿದೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಸಂತೋಷ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.
ಗ್ರಾಮ ಪಂಚಾಯತ್ ಅನ್ನೂ ಕೂಡ ಗೆಲ್ಲೋಕೆ ಆಗದೇ ಇರೋರು ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದರು ಎಂದು ಸ್ವ ಪಕ್ಷ ನಾಯಕರ ಮೇಲೆ ಹರಿಹಾಯ್ದ ಅವರು ಈಗ ವೋಟ್ ಬೇಕು ಅಂತ ಬಿಎಸ್ ವೈ ನಾಯಕತ್ವ ಎನ್ನುತ್ತಿದ್ದಾರೆ ಎಂದರು. ಈ ಮಧ್ಯೆ, ಯಡಿಯೂರಪ್ಪ ಅವರು ತಮ್ಮ ಪುತ್ರ ಹಾಗೂ ಶಿಕಾರಿಪುರ ಶಾಸಕ ಬಿ.ಎಸ್.ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ.