ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ- ಸರ್ವಪಕ್ಷ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕಳೆದ 123 ವರ್ಷಗಳಲ್ಲೇ ರಾಜ್ಯ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆ ಕೊರತೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ಈ ಸಂಬಂಧ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.

ತಮಿಳುನಾಡಿಗೆ ಇನ್ನೂ 15 ದಿನ ನಿತ್ಯ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸೂಚಿಸಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ ಕರೆಯಲಾಗಿತ್ತು.

ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ಸಭೆ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ರಾಜ್ಯದಲ್ಲಿ ಬರ ಇದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಕೊರತೆಯಾಗಿದೆ. ಡ್ಯಾಂಗಳಲ್ಲಿ ನೀರಿಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಆಹಾಕಾರ ಉಂಟಾಗುವ ಸಾಧ್ಯತೆ ಇದೆ. ಇಂತಹ ಸಂದಿಗ್ಥ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದರು.

ತಮಿಳುನಾಡಿಗೆ ನಿತ್ಯ 5000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ(CWRC) ಆದೇಶ ನೀಡಿದೆ. ಇದನ್ನು ಮರು ಪರಿಶೀಲನೆ ಮಾಡುವಂತೆ ಮನವಿ ಮಾಡಲು ನಿರ್ಧರಿಸಿದ್ದೇವೆ. ವಸ್ತುಸ್ಥಿತಿ ವಿವರಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೆ ಪತ್ರ ಬರೆಯುತ್ತೇವೆ ಎಂದು ಸಿಎಂ ತಿಳಿಸಿದರು.

ಸಮಿತಿಯ ಮುಂದೆ ಮತ್ತೊಂದು ಅರ್ಜಿ ಹಾಕುತ್ತೇವೆ. ಸುಪ್ರೀಂಕೋರ್ಟ್​​ಗೆ ವಾಸ್ತವಾಂಶ ತಿಳಿಸುವ ಕೆಲಸ ಮಾಡುತ್ತೇವೆ. ಸೆಪ್ಟೆಂಬರ್ 11 ರ ತನಕ ನಾವು 99 ಟಿಎಂಸಿ ನೀರಿನ ಬದಲು 37 ಟಿಎಂಸಿ ಮಾತ್ರ ಬಿಟ್ಟಿದ್ದೇವೆ. ನಾವೀಗ ಸಂಪೂರ್ಣ ನೀರು ಬಿಡ್ತಿಲ್ಲ. ಬೆಳೆ ಉಳಿಸಿಕೊಳ್ಳಲು ನಮಗೆ 70 ಟಿಎಂಸಿ ಬೇಕು. 30 ಟಿಎಂಸಿ ಕುಡಿಯುವ ನೀರು ಹಾಗೂ 3 ಟಿಎಂಸಿ ಕೈಗಾರಿಕೆಗೆ ಬೇಕು. ನಮ್ಮ ಬಳಿ ಈಗ ಇರುವುದು 53 ಟಿಎಂಸಿ ಮಾತ್ರ. ನಾಲ್ಕು ಜಲಾಶಯಗಳಿಂದ ಕೇವಲ 53 ಟಿಎಂಸಿ ನೀರು ಮಾತ್ರ ನಮ್ಮತ್ರ ಇದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಕಾವೇರಿ ನದಿಯ ಒಳಹರಿವು 30 ವರ್ಷಗಳಲ್ಲೇ ಕಡಿಮೆ
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಕಾವೇರಿ ನದಿಯ ಒಳಹರಿವು 30 ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ. ನೈಋತ್ಯ ಮಾನ್ಸೂನ್​ ಮುಗಿಯುವ ಹಂತದಲ್ಲಿದೆ. ಜಲಾಶಯಗಳಿಗೆ ಒಳ ಹರಿವಿನ ಪ್ರಮಾಣ ಕ್ಷೀಣಿಸುತ್ತಿದ್ದು, ಈಗಿರುವ ನೀರನ್ನು ನಮ್ಮ ಅಗತ್ಯಗಳಿಗೆ ಕಾಯ್ದಿರಿಸಬೇಕಾಗಿದೆ ಎಂದು ಹೇಳಿದ್ದಾರೆ.

ಮೂರು ದಶಕಗಳಲ್ಲಿ ಸರಾಸರಿ ಶೇ.54 ರಷ್ಟು ಮಳೆ ಕೊರತೆಯಾಗಿದೆ. ರಾಜ್ಯದಲ್ಲಿ ಬೆಳೆದಿರುವ ಬೆಳೆಗಳಿಗೆ 70.20 ಟಿಎಂಸಿ ನೀರು ಬೇಕು. ಕುಡಿಯುವ ನೀರಿನ ಉದ್ದೇಶಕ್ಕೆ 2024ರ ಸೆಪ್ಟೆಂಬರ್‌ನಿಂದ ಜುಲೈವರೆಗೆ 33 ಟಿಎಂಸಿ, ಕೈಗಾರಿಕೆಗಳ ಬಳಕೆಗೆ 3 ಟಿಎಂಸಿ ಅಗತ್ಯವಿದೆ. ಒಟ್ಟಾರೆ ಕರ್ನಾಟಕಕ್ಕೆ 106.20 ಟಿಎಂಸಿ ನೀರು ಬೇಕು ಎಂದು ವಿವರಿಸಿದರು. ಆದರೆ, ಕಾವೇರಿ ಕಣಿವೆಯ ರಾಜ್ಯದ ನಾಲ್ಕು ಜಲಾಶಯಗಳಲ್ಲಿ ಲಭ್ಯವಿರುವ ಲೈವ್ ಸ್ಟೋರೇಜ್ 53.287 ಟಿಎಂಸಿ ಎಂದು ಡಿಸಿಎಂ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!