ಶಕ್ತಿಯೋಜನೆಗೆ ಖಾಸಗಿ ಸಾರಿಗೆ ಸಂಘಟನೆ ಖಂಡನೆ- ನಾಳೆ ಬೆಂಗಳೂರು ಬಂದ್, ಆಟೋ, ಕ್ಯಾಬ್, ಖಾಸಗಿ ಬಸ್ ಸ್ಥಗಿತ

ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ಉದ್ಯಮಕ್ಕಾಗಿರುವ ನಷ್ಟಕ್ಕೆ ಪರಿಹಾರ ನೀಡುವುದು ಸೇರಿದಂತೆ 30 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಭಾನುವಾರ ಮಧ್ಯರಾತ್ರಿ 12 ಗಂಟೆಯಿಂದ ಬೆಂಗಳೂರಿನಲ್ಲಿ ಸಾರಿಗೆ ಬಂದ್ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ರಾಜಧಾನಿಯಲ್ಲಿ ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ.

ಬೆಂಗಳೂರು ಸಾರಿಗೆ ಬಂದ್ ನಲ್ಲಿ ಬಸ್, ಆಟೋ, ಕ್ಯಾಬ್ ಗಳ 32 ಕ್ಕೂ ಹೆಚ್ಚಿನ ಸಂಘಟನೆಗಳು ಪಾಲ್ಗೊಳ್ಳುತ್ತಿದ್ದು, 7 ಲಕ್ಷಕ್ಕೂ ಹೆಚ್ಚಿನ ವಾಹನಗಳು ಸೇವೆ ಸ್ಥಗಿತಗೊಳಿಸುತ್ತಿವೆ. ಅಲ್ಲದೆ, ಬಂದ್ ಕರೆ ಉಲ್ಲಂಘಿಸಿ ಸೇವೆ ನೀಡಲು ಮುಂದಾಗುವ ಯೆಲ್ಲೋ ಬೋರ್ಡ್ ವಾಹನಗಳನ್ನು ತಡೆಯಲಾಗುವುದು ಎಂದು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಎಚ್ಚರಿಕೆ ನೀಡಿದೆ. ಹೀಗಾಗಿ ಬಂದ್’ಗೆ ಬೆಂಬಲ ನೀಡದಿರುವ ಆಟೋ, ಬಸ್ ಹಾಗೂ ಕ್ಯಾಬ್ ಗಳು ಕೂಡ ಸೋಮವಾರ ರಸ್ತೆಗಿಳಿಯುವುು ಅನುಮಾನ ಎನ್ನುವಂತಾಗಿದೆ.

ಈ ನಡುವೆ ಸೋಮವಾರ ಕೆಲಸದ ದಿನ ಆಗಿರುವ ಕಾರಣ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗ ದಂತೆ ಮಾಡಲು ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಒಂದು ವೇಳೆ ಬಿಎಂಟಿಸ್ ಬಸ್ ಗಳು ಸಾಲದಿದ್ದರೆ, ಕೆಎಸ್ಆರ್’ಟಿಸಿ ಬಸ್ ಗಳನ್ನೂ ಬೆಂಗಳೂರಿನಲ್ಲಿ ಸಾರಿಗೆ ಸೇವೆಗೆ ನೀಡುವ ಬಗ್ಗೆಯೂ ಚರ್ಚೆಗಳು ನಡೆದಿವೆ ಎಂದು ತಿಳಿದುಬಂದಿದೆ.

ಖಾಸಗಿ ಸಾರಿಗೆ ಸಂಘಟನೆಗಳು ಕರೆ ನೀಡಿರುವ ಬಂದ್ ಕರೆಗೆ ಖಾಸಗಿ ಶಾಲಾ ಬಸ್ ಗಳ ಚಾಲಕರು, ವ್ಯಾನ್ ಮಾಲೀಕರು ಹಾಗೂ ಇತರೆ ವಾಹನಗಳ ಚಾಲಕರೂ ಕೂಡ ಬೆಂಬಲ ನೀಡಿದ್ದು, ಇದು ಮಕ್ಕಳ ಮೇಲೆ ಕೂಡ ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ನಗರದ ಕೆಲ ಶಾಲೆಗಳು ಸೋಮವಾರ ರಜೆ ಘೋಷಣೆ ಮಾಡಿವೆ.

ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಪ್ರಧಾನ ಕಾರ್ಯದರ್ಶಿ ಡಿ ಶಶಿ ಕುಮಾರ್ ಅವರು ಮಾತನಾಡಿ, ಹಲವು ಖಾಸಗಿ ಶಾಲೆಗಳು ಸೋಮವಾರ ರಜೆ ನೀಡಿವೆ. ಆದರೆ, ಕೆಲವು ಶಾಲೆಗಳು ನೀಡಿಲ್ಲ. ರಜೆ ಘೋಷಿಸದ ಶಾಲೆಗಳಿಗೆ ಪೋಷಕರೇ ಮಕ್ಕಳನ್ನು ಕರೆದುಕೊಂಡು ಹೋಗಬೇಕಿದೆ ಎಂದು ಹೇಳಿದ್ದಾರೆ.

ಈ ನಡುವೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಜಯನಗರ, ಕಲಾಸಿಪಾಳ್ಯ ಮತ್ತು ಕಂಟೋನ್ಮೆಂಟ್‌ನಲ್ಲಿ ಸಾರಿಗೆ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದು, ಬಂದ್ ಕರೆಗೆ ಬೆಂಬಲ ನೀಡುವಂತೆ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಏಳು ಲಕ್ಷಕ್ಕೂ ಹೆಚ್ಚು ಖಾಸಗಿ ವಾಹನಗಳು ಕಾರ್ಯನಿರ್ವಹಿಸುತ್ತಿವೆ. 1.6 ಲಕ್ಷಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಕ್ಯಾಬ್‌ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿಭಟನೆಯಲ್ಲಿ ಒಂದು ಲಕ್ಷ ಏರ್‌ಪೋರ್ಟ್‌ ಕ್ಯಾಬ್‌ಗಳ ಚಾಲಕರು ಪಾಲ್ಗೊಂಡರೂ ಸರ್ಕಾರಕ್ಕೆ ಇದರ ಬಿಸಿ ತಟ್ಟಲಿದೆ ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಅವರು ಹೇಳಿದ್ದಾರೆ.

ಸಾರ್ವಜನಿಕರಿಗೆ ಸಮಸ್ಯೆ ಮಾಡುವುದು ನಮ್ಮ ಉದ್ದೇಶವಲ್ಲ. ಸರ್ಕಾರಕ್ಕೆ ನಮ್ಮ ಬೇಡಿಕೆ ತಲುಪಬೇಕಿದೆ. ನಮ್ಮ ಬೇಡಿಕೆ ಈಡೇರುವವರೆಗೊ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ.

ಬಂದ್ ಹಿನ್ನೆಲೆ ನಗರದಲ್ಲಿ ಹೆಚ್ಚಿದ ಭದ್ರತೆ
ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಮಾತನಾಡಿ, ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಬಂದ್ ನಲ್ಲಿ ಪಾಲ್ಗೊಳ್ಳುವಂತೆ ಕ್ಯಾಬ್, ಆಟೋ ಹಾಗೂ ಖಾಸಗಿ ಬಸ್ ಚಾಲಕರ ಮೇಲೆ ಬಲವಂತ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಲಳಿದ್ದಾರೆ.

ಬಂದ್ ಸಂದರ್ಭದಲ್ಲಿ ಸೇವೆಯೊದಗಿಸಲು ಮುಂದಾಗುವ ಕ್ಯಾಬ್, ಆಟೋ ಹಾಗೂ ಖಾಸಗಿ ಬಸ್ ಚಾಲಕರಿಗೆ ನಾವು ರಕ್ಷಣೆ ನೀಡುತ್ತೇವೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ.

ಹೆಚ್ಚುವರಿ ಬಸ್ ನಿಯೋಜನೆಗೆ ಬಿಎಂಟಿಸಿ ಮುಂದು… ಈ ನಡುವೆ  ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ಬಂದ್ ಕರೆಯನ್ನು ಗಮನದಲ್ಲಿಟ್ಟುಕೊಂಡು ಸೋಮವಾರ ಹೆಚ್ಚುವರಿ ಬಸ್‌ಗಳ ನಿಯೋಜನೆಗೊಳಿಸಲು ಬಿಎಂಟಿಸಿ ಮುಂದಾಗಿದೆ.

ಬೆಂಗಳೂರಿಗರ ಅನುಕೂಲಕ್ಕಾಗಿ ಬಿಎಂಟಿಸಿ ಬಸ್ ಗಳ ಜೊತೆಗೆ ಕೆಎಸ್ಆರ್’ಟಿಸಿ ಬಸ್ ಗಳನ್ನೂ ಕೂಡ ಸಂಚಾರಕ್ಕೆ ಬಿಡಲು ಸಿದ್ಧತೆ ನಡೆಸಿದೆ. ಅಲ್ಲದೆ, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ನೌಕರರಿಗೆ ಸೋಮವಾರ ರಜೆ ತೆಗೆದುಕೊಳ್ಳದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಕಾರ್ಖಾನೆಗಳು, ಕಚೇರಿಗಳು, ಶಾಲಾ-ಕಾಲೇಜುಗಳು ಇರುವ ಪ್ರದೇಶಗಳಿಗೆ ಹೆಚ್ಚುವರಿ ಬಸ್‌ಗಳ ನಿಯೋಜನೆಗೊಳಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!