ತೆಲಂಗಾಣದಲ್ಲೂ ‘5 ಗ್ಯಾರಂಟಿ’ ಘೋಷಣೆಗೆ ಕಾಂಗ್ರೆಸ್ ವೇದಿಕೆ ಸಜ್ಜು!

ಹೈದರಾಬಾದ್: ಕರ್ನಾಟಕ ಚುನಾವಣೆಯಲ್ಲಿ ‘ಐದು ಗ್ಯಾರಂಟಿ’ ಯೋಜನೆಗಳ ಮೂಲಕ ಗೆದ್ದು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಇದೀಗ ತೆಲಂಗಾಣದಲ್ಲೂ ಇದೇ ಮಾದರಿಯಲ್ಲಿ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಐದು ಗ್ಯಾರಂಟಿಗಳ ಘೋಷಣೆಗೆ ವೇದಿಕೆ ಸಜ್ಜಾಗಿದೆ.

ಸೆ 17 ರಂದು ನಡೆಯಲಿರುವ ರ‍್ಯಾಲಿಯಲ್ಲಿ ಕಾಂಗ್ರೆಸ್ ಪಕ್ಷದ  ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 5 ಚುನಾವಣಾ ಗ್ಯಾರಂಟಿಗಳನ್ನು ಘೋಷಿಸಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮತ್ತು ಸಂಸದ ಎ. ರೇವಂತ್ ರೆಡ್ಡಿ ಹೇಳಿದ್ದಾರೆ.

ಹೊಸದಾಗಿ ರಚಿಸಲಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಮೊದಲ ಸಭೆಯು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ  ಸೆ. 16 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ಸೆ. 17 ರಂದು ನಡೆಯಲಿರುವ ವಿಸ್ತೃತ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯು ಎಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥರನ್ನು ಒಳಗೊಂಡಿರುತ್ತದೆ ಎಂದು ಕಾಂಗ್ರೆಸ್ ಈಗಾಗಲೇ ಘೋಷಿಸಿದೆ. 

ಕೆಲವೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಭರವಸೆಗಳನ್ನು ಒಳಗೊಂಡ ‘ರೈತ ಘೋಷಣೆ’, ‘ಎಸ್‌ಸಿ, ಎಸ್‌ಟಿ ಘೋಷಣೆ’ ಮತ್ತು ‘ಯುವ ಘೋಷಣೆ’ಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ನೆರೆಯ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಘೋಷಿಸಿದ ‘ಐದು ಗ್ಯಾರಂಟಿಗಳು ಪಕ್ಷದ ಯಶಸ್ಸಿಗೆ ಪ್ರಮುಖ ಅಂಶವೆಂದು ನಂಬಲಾಗಿದೆ. ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್ ಎಸ್ ಈಗಾಗಲೇ ಒಟ್ಟು 119 ವಿಧಾನಸಭಾ ಸ್ಥಾನಗಳಲ್ಲಿ 115 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

 ಈ ಮಧ್ಯೆ 1948 ರಲ್ಲಿ ನಿಜಾಮ್ ಆಳ್ವಿಕೆಯಿಂದ ಹೈದರಾಬಾದ್ ರಾಜ್ಯವು ಭಾರತೀಯ ಒಕ್ಕೂಟ ದೊಂದಿಗೆ ವಿಲೀನಗೊಂಡ ದಿನವಾದ ಸೆ. 17 ರಂದು ವಿವಿಧ ರಾಜಕೀಯ ಪಕ್ಷಗಳು ಹೈದರಾಬಾದ್‌ ವಿಲೀನ ದಿನವನ್ನು ಆಚರಿಸಲು ವಿವಿಧ ಕಾರ್ಯಕ್ರಮ ಆಯೋಜಿಸಲು ಯೋಜಿಸಿವೆ. ಅಂದೇ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಲು ಸಜ್ಜಾಗಿದೆ. 

Leave a Reply

Your email address will not be published. Required fields are marked *

error: Content is protected !!