ಜಿ20 ಶೃಂಗಸಭೆ: ಜಾಗತಿಕ ಜೈವಿಕ ಇಂಧನ ಮೈತ್ರಿ, ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಜಾಗತಿಕ ಜೈವಿಕ ಇಂಧನ ಮೈತ್ರಿಯನ್ನು ಭಾರತ ಶನಿವಾರ ಘೋಷಿಸಿತು. ಅಲ್ಲದೇ, ಜಿ20 ರಾಷ್ಟ್ರಗಳು ಈ ಮೈತ್ರಿ ಸೇರುವಂತೆ ಒತ್ತಾಯಿಸಿತು.

ಜಿ 20 ಶೃಂಗಸಭೆಯ ಅಧಿವೇಶನದಲ್ಲಿ ‘ಒಂದು ಭೂಮಿ’ ವಿಷಯ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪರಿಸರ ಮತ್ತು ಹವಾಮಾನ ವೀಕ್ಷಣೆಗಾಗಿ ಜಿ 20 ಉಪಗ್ರಹ ಮಿಷನ್ ಪ್ರಾರಂಭ ಕುರಿತು ಪ್ರಸ್ತಾಪಿಸಿದರು. ಅಲ್ಲದೇ, ಪರಿಸರ ರಕ್ಷಣೆ ಕಾರ್ಯ ಆರಂಭಿಸುವಂತೆ ವಿಶ್ವ ನಾಯಕರನ್ನು ಆಗ್ರಹಿಸಿದರು. 

“ಇಂದು ಇಂಧನ ಮಿಶ್ರಣ ಕ್ಷೇತ್ರದಲ್ಲಿ ಎಲ್ಲಾ ದೇಶಗಳು ಒಟ್ಟಾಗಿ ಕೆಲಸ ಮಾಡುವುದು ಅಗತ್ಯವಾಗಿದೆ. ಪೆಟ್ರೋಲ್ ನಲ್ಲಿ ಶೇ. 20 ರಷ್ಟು ಎಥೆನಾಲ್ ಮಿಶ್ರಣದ ನಮ್ಮ ಪ್ರಸ್ತಾಪವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಅವರು ಹೇಳಿದರು. 

ಜಾಗತಿಕ ಒಳಿತಿಗಾಗಿ ನಾವು ಮತ್ತೊಂದು ಮಿಶ್ರಣವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬಹುದು. ಇದು ಸ್ಥಿರವಾದ ಇಂಧನ ಪೂರೈಕೆಯನ್ನು ಖಚಿತಪಡಿಸುತ್ತದೆ ಮತ್ತು ಹವಾಮಾನ ಭದ್ರತೆಗೆ ಕೊಡುಗೆ ನೀಡುತ್ತದೆ ಎಂದು ಮೋದಿ ಹೇಳಿದರು.

ಜೈವಿಕ ಇಂಧನಗಳ ಬೇಡಿಕೆ ಮತ್ತು ತಂತ್ರಜ್ಞಾನ ವಿನಿಮಯ ಉತ್ತೇಜಿಸುವುದು, ಆ ಮೂಲಕ ವ್ಯಾಪಾರ ವೃದ್ಧಿ ಈ ಮೈತ್ರಿಯ ಉದ್ದೇಶವಾಗಿದೆ.

ಭಾರತದ ಪರಿಕಲ್ಪನೆಯ ಈ ಮೈತ್ರಿಗೆ ಅಮೆರಿಕ ಮತ್ತು ಬ್ರೆಜಿಲ್ ಸ್ಥಾಪಕ ಸದಸ್ಯರಾಗಿದ್ದಾರೆ. ಇತರೆ 19 ದೇಶಗಳು ಕೂಡಾ ಈ ಮೈತ್ರಿಗೆ ಆಸಕ್ತಿ ವಹಿಸಿದ್ದು, ಜಿ 20 ವ್ಯಾಪ್ತಿಗೆ ಬರದ ಕೆಲವು ದೇಶಗಳು ಕೂಡಾ ಬೆಂಬಲ ಸೂಚಿಸಿವೆ. ಆದರೆ, ಚೀನಾ ಹಾಗೂ ತೈಲ ಸಮೃದ್ಧಿ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ರಷ್ಯಾ ಈ ಮೈತ್ರಿಯಿಂದ  ದೂರ ಉಳಿಯಲು ನಿರ್ಧರಿಸಿವೆ.

ಯುಎಸ್ ಅಧ್ಯಕ್ಷ ಜೋ ಬೈಡನ್, ಸೌದಿ ಅರೇಬಿಯಾ ರಾಜ ಮೊಹಮ್ಮದ್ ಬಿನ್ ಸಲ್ಮಾನ್, ಯುಕೆ ಪ್ರಧಾನಿ ರಿಷಿ ಸುನಕ್ ಮತ್ತಿತರರು ಈ ಅಧಿವೇಶನದಲ್ಲಿ ಪಾಲ್ಗೊಂಡರು.

Leave a Reply

Your email address will not be published. Required fields are marked *

error: Content is protected !!