ಪ್ರಧಾನಿ ಯಾಕೆ ಮೌನವಾಗಿದ್ದಾರೆ?: ಅದಾನಿ ವಿಷಯದಲ್ಲಿ ಸಮಗ್ರ ತನಿಖೆಗೆ ರಾಹುಲ್ ಗಾಂಧಿ ಆಗ್ರಹ
ಮುಂಬೈ: ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಗೆ ಅವಕಾಶ ನೀಡಬೇಕು ಮತ್ತು ಅದಾನಿ ವಿಷಯದಲ್ಲಿ ಸಮಗ್ರ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಗುರುವಾರ ಇಲ್ಲಿ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರಮುಖ ಜಾಗತಿಕ ಹಣಕಾಸು ವೃತ್ತಪತ್ರಿಕೆಗಳು ಅದಾನಿ ಶೇರುಗಳ ಕುರಿತು ಬಹು ಮುಖ್ಯವಾದ ಪ್ರಶ್ನೆಗಳನ್ನೆತ್ತಿವೆ. ಈ ಪತ್ರಿಕೆಗಳು ಭಾರತದಲ್ಲಿ ಹೂಡಿಕೆ ಮತ್ತು ವಿಶ್ವದಲ್ಲಿ ಭಾರತದ ಕುರಿತು ದೃಷ್ಟಿಕೋನದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿವೆ ಎಂದು ಹೇಳಿದರು. ಜಿ20 ಶೃಂಗಸಭೆಯು ವಿಶ್ವದಲ್ಲಿ ಭಾರತದ ಸ್ಥಾನದ ಕುರಿತಾಗಿದೆ ಮತ್ತು ಭಾರತದ ಆರ್ಥಿಕ ವಾತಾವರಣದಲ್ಲಿ ಸಮಾನ ಸ್ಪರ್ಧೆಗೆ ಅವಕಾಶ ಮತ್ತು ಪಾರದರ್ಶಕತೆ ಇರುವುದು ಅತ್ಯಂತ ಮುಖ್ಯವಾಗಿದೆ ಎಂದರು.
ಈ ಹಣ ಯಾರದು ಎನ್ನುವುದು ಮೊದಲ ಪ್ರಶ್ನೆಯಾಗಿದೆ. ಅದು ಅದಾನಿಯದೇ ಅಥವಾ ಬೇರೆಯವರದೇ? ಗೌತಮ್ ಅದಾನಿಯವರ ಸೋದರ ವಿನೋದ್ ಅದಾನಿ ಇದರ ಹಿಂದಿರುವ ಮಾಸ್ಟರ್ ಮೈಂಡ್ ಆಗಿದ್ದಾರೆ. ಹಣದ ಈ ಸುತ್ತು ಪಯಣದಲ್ಲಿ ಚಾಂಗ್ ಚುಂಗ್-ಲಿಂಗ್ ಮತ್ತು ನಾಸೀರ್ ಅಲಿ ಶಾಬಾನ್ ಎಂಬ ಇತರ ಇಬ್ಬರು ವ್ಯಕ್ತಿಗಳು ಭಾಗಿಯಾಗಿದ್ದಾರೆ. ಹೀಗಾಗಿ ಹೆಚ್ಚುಕಡಿಮೆ ಭಾರತದ ಎಲ್ಲ ಮೂಲಸೌಕರ್ಯಗಳನ್ನು ನಿಯಂತ್ರಿಸುತ್ತಿರುವ ಕಂಪನಿಯೊಂದರ ಮೌಲ್ಯಮಾಪನದೊಂದಿಗೆ ಆಟವಾಡಲು ಇಬ್ಬರು ವಿದೇಶಿ ವ್ಯಕ್ತಿಗಳಿಗೆ ಏಕೆ ಅವಕಾಶ ನೀಡಲಾಗಿದೆ ಎಂಬ ಎರಡನೇ ಪ್ರಶ್ನೆ ಉದ್ಭವಿಸುತ್ತದೆ ಎಂದು ರಾಹುಲ್ ಹೇಳಿದರು.
ಭಾರತದ ಪ್ರತಿಷ್ಠೆ ಅಪಾಯದಲ್ಲಿದೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಹೇಳಿದ ರಾಹುಲ್, ಈ ವಿಷಯದಲ್ಲಿ ಪ್ರಧಾನಿಯವರೇಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ಅದಾನಿ ವಿರುದ್ಧ ಸೆಬಿ ತನಿಖೆ ನಡೆಸಿತ್ತು, ಆದರೆ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು ಎಂದು ಆರೋಪಿಸಿದ ಅವರು, ಇಲ್ಲಿ ಏನೋ ತಪ್ಪು ನಡೆದಿದೆ ಎನ್ನುವುದು ಅತ್ಯಂತ ಸ್ಪಷ್ಟವಾಗಿದೆ ಎಂದರು.