ರೋಜ್ ಗಾರ್ ಮೇಳ: 51 ಸಾವಿರ ಯುವಕರಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೋಮವಾರ 51,000ಕ್ಕೂ ಹೆಚ್ಚು ಜನರಿಗೆ ರೋಜ್‌ಗಾರ್ ಮೇಳದಡಿಯಲ್ಲಿ ಸರ್ಕಾರಿ ಉದ್ಯೋಗ ನೇಮಕಾತಿ ಪತ್ರವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿತರಿಸಿದ್ದಾರೆ.

ಇಂದು ದೆಹಲಿಯಿಂದ ವರ್ಚುವಲ್ ಕಾನ್ಫರೆನ್ಸ್ ಮೂಲಕ ರೋಜ್ ಗಾರ್ ಮೇಳದ 8ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅರೆಸೇನಾ ಪಡೆಗಳಲ್ಲಿನ ನೇಮಕಾತಿ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದ್ದು, ನೇಮಕಾತಿಯ ಸಮಯವನ್ನು ಕಡಿಮೆಗೊಳಿಸಲಾಗಿದೆ ಎಂದು ಅವರು ಹೇಳಿದರು.

ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ನಮ್ಮ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ರೋಜ್‌ಗರ್ ಮೇಳ ಒಂದು ಪ್ರಮುಖ ಹೆಜ್ಜೆಯಾಗಿದೆ. ಭಾರತ ಸರ್ಕಾರ ಮತ್ತು ಕೆಲವು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ದೇಶಾದ್ಯಂತ ರೋಜ್‌ಗಾರ್ ಮೇಳಗಳನ್ನು ಆಯೋಜಿಸುತ್ತಿವೆ ಮತ್ತು ಪ್ರತಿ ತಿಂಗಳು ಲಕ್ಷಗಟ್ಟಲೆ ಯುವಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸುತ್ತಿವೆ. ಯುವಕರಿಗೆ ಹೊಸ ಮಾರ್ಗಗಳನ್ನು ತೆರೆಯಲು ಅರೆಸೇನಾ ಪಡೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ ಎಂದರು. 

ಅರೆಸೇನಾ ಪಡೆಗಳಲ್ಲಿನ ನೇಮಕಾತಿ ಪ್ರಕ್ರಿಯೆಯನ್ನು ನೇಮಕಾತಿಯ ಸಮಯವನ್ನು ಕಡಿಮೆ ಮಾಡಲು ಸುವ್ಯವಸ್ಥಿತಗೊಳಿಸಲಾಗಿದೆ. ಯುವಕರಿಗೆ ಉದ್ಯೋಗಾವಕಾಶಗಳ ಕುರಿತು ಮಾತನಾಡಿದ ಅವರು, ಆಟೋ ಮೊಬೈಲ್, ಫಾರ್ಮಾ ಕ್ಷೇತ್ರಗಳು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ. ಈ ದಶಕದಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ. ಈ ಭರವಸೆಯನ್ನು ನಾನು ನೀಡುತ್ತಿರುವ ಸಂದರ್ಭದಲ್ಲಿ ಅದರ ಸಂಪೂರ್ಣ ಜವಾಬ್ದಾರಿಯನ್ನು ಕೂಡ ಹೊರುತ್ತೇನೆ ಎಂದರು. 

ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಾಗಿ ಎಲ್ಲಾ ವಲಯದ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಆಹಾರದಿಂದ ಫಾರ್ಮಾವರೆಗೆ, ಬಾಹ್ಯಾಕಾಶದಿಂದ ಸ್ಟಾರ್ಟ್‌ಅಪ್‌ಗಳವರೆಗೆ, ಯಾವುದೇ ಆರ್ಥಿಕತೆಗಾಗಿ ಎಲ್ಲಾ ಕ್ಷೇತ್ರಗಳು ಬೆಳೆಯುವುದು ಅವಶ್ಯಕ ಎಂದು ಅಭಿಪ್ರಾಯಪಟ್ಟರು. 

ಬ್ಯಾಂಕಿಂಗ್ ಕ್ಷೇತ್ರವನ್ನು ಸುಧಾರಿಸಿ ಸಾಮಾನ್ಯ ಲಭ್ಯತೆಗೆ ಹೆಚ್ಚು ಲಭ್ಯವಾಗುವಂತೆ ಮಾಡುವ ನಿರ್ಧಾರಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಪ್ರಧಾನಿ ಮೋದಿ ಅವರು 9 ವರ್ಷಗಳ ಹಿಂದೆ ಆಗಸ್ಟ್ 28 ರಂದು ಜನ್ ಧನ್ ಯೋಜನೆಯನ್ನು ಪ್ರಾರಂಭಿಸಲಾಯಿತು ಎಂದು ನೆನಪಿಸಿದರು. ಈ ಯೋಜನೆಯು ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು. 

ಅರೆಸೈನಿಕ ಪಡೆಗಳ ಸಿಬ್ಬಂದಿ ತಮ್ಮ ಸೇವೆಯ ಸಮಯದಲ್ಲಿಯೂ ಕಲಿಯುವ ಇಚ್ಛೆಯನ್ನು ಮುಂದುವರಿಸಲು ಅವರು ಸೂಚಿಸಿದರು. ಕೌಶಲ್ಯ ಅಭಿವೃದ್ಧಿ ಮತ್ತು ಕೋರ್ಸ್‌ಗಳಿಗೆ ಹೊಸ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವಂತೆ ಅವರು ಹೊಸ ನೇಮಕಾತಿಗಳನ್ನು ಒತ್ತಾಯಿಸಿದರು.

ಈ ಕೋರ್ಸ್‌ಗಳಲ್ಲಿ ನೀವು ಏನನ್ನು ಕಲಿಯುತ್ತೀರಿ ಅದು ಅತ್ಯುತ್ತಮ ಅಧಿಕಾರಿಯಾಗಲು ನಿಮಗೆ ಸಹಾಯ ಮಾಡುತ್ತದೆ” ಎಂದರು. ಹೊಸ ನೇಮಕಾತಿಗಳನ್ನು ತಮ್ಮ ದೈಹಿಕ ಸಾಮರ್ಥ್ಯದ ಮೇಲೆ ಕೇಂದ್ರೀಕರಿಸಲು ಮತ್ತು ಸೇವೆಯ ಉದ್ದಕ್ಕೂ ಅವರ ಆರೋಗ್ಯ ಮತ್ತು ಫಿಟ್‌ನೆಸ್ ನ್ನು ಕಾಪಾಡಿಕೊಳ್ಳಲು ಕೇಳಿಕೊಂಡರು.

ಸ್ಥಳೀಯತೆಗೆ ಒತ್ತು ನೀಡುವ ಉದ್ದೇಶದಿಂದ ಉತ್ಪಾದನೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸರ್ಕಾರ ಮೇಡ್ ಇನ್ ಇಂಡಿಯಾ ಲ್ಯಾಪ್ ಟಾಪ್ ಗಳು, ಕಂಪ್ಯೂಟರ್ ಗಳ ಖರೀದಿಗೆ ಒತ್ತು ನೀಡುವುದಾಗಿ ಹೇಳಿದರು. 

ಪ್ರವಾಸೋದ್ಯಮ ಕ್ಷೇತ್ರವು 2030ರ ವೇಳೆಗೆ ಭಾರತೀಯ ಆರ್ಥಿಕತೆಗೆ 20 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಕೊಡುಗೆ ನೀಡುವ ಸಾಧ್ಯತೆಯಿದೆ, ಇದು ಸುಮಾರು 13-14 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದರು. 

ಉತ್ತರ ಪ್ರದೇಶದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ರಾಜ್ಯದಲ್ಲಿ ಉತ್ತಮ ಆಡಳಿತವು ಕಾನೂನು ಸುವ್ಯವಸ್ಥೆಯನ್ನು ಸ್ಥಾಪಿಸಲು ಕಾರಣವಾಗಿದೆ, ಇದು ಸಾಕಷ್ಟು ಹೂಡಿಕೆಗಳನ್ನು ತಂದಿದೆ ಎಂದು ಹೇಳಿದರು.

ಭದ್ರತೆಯ ವಾತಾವರಣದಲ್ಲಿ, ಕಾನೂನಿನ ಆಡಳಿತದ ಸ್ಥಾಪನೆಯು ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ, ಜನರಲ್ಲಿ ವಿಶ್ವಾಸವನ್ನು ತುಂಬುತ್ತದೆ ಮತ್ತು ಹೂಡಿಕೆಗಳನ್ನು ತರುತ್ತಿದ್ದು, ಅಪರಾಧಗಳು ಹೆಚ್ಚಿರುವ ರಾಜ್ಯಗಳಲ್ಲಿ ಹೂಡಿಕೆಗಳು ಮತ್ತು ಉದ್ಯೋಗಾವಕಾಶಗಳು ಕೂಡ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. 

45 ಸ್ಥಳಗಳಲ್ಲಿ ರೋಜ್ ಗಾರ್: ದೇಶಾದ್ಯಂತ 45 ಸ್ಥಳಗಳಲ್ಲಿ ರೋಜ್‌ಗಾರ್ ಮೇಳ ನಡೆಯಲಿದೆ ಎಂದು ಪ್ರಧಾನಮಂತ್ರಿಗಳ ಕಚೇರಿ ತಿಳಿಸಿದೆ. ರೋಜ್‌ಗಾರ್ ಮೇಳದ ಮೂಲಕ ಗೃಹ ವ್ಯವಹಾರಗಳ ಸಚಿವಾಲಯವು (MHA) ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF), ಗಡಿ ಭದ್ರತಾ ಪಡೆ (BSF), ಶಾಸ್ತ್ರ ಸೀಮಾ ಬಾಲ್ (SSB) ನಂತಹ ವಿವಿಧ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (CAPFs) ಸಿಬ್ಬಂದಿಯನ್ನು ಹಾಗೂ ಅಸ್ಸಾಂ ರೈಫಲ್ಸ್, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (CISF), ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP)ಗಳಿಗೆ ನೇಮಕಾತಿ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!