ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರ ಹೇಳಿಕೆ  ಅವಿವೇಕ ಹಾಗೂ  ಬಾಲಿಷ- ಕೊಡವೂರು 

ಉಡುಪಿ: ಪಾರಾ ಮೆಡಿಕಲ್ ಕಾಲೇಜು ಒಂದರಲ್ಲಿ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಮೊಬೈಲ್ ಇಟ್ಟ ಪ್ರಕರಣವನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂಬ ಬಿಜೆಪಿ ಜಿಲ್ಲಾಧ್ಯಕ್ಷ  ಕುಯಿಲಾಡಿ ಸುರೇಶ್ ನಾಯಕ್ ಅವರ ಆರೋಪ ಬಾಲಿಷ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ‌ ಕುಮಾರ್ ಕೊಡವೂರ ಹೇಳಿದ್ದಾರೆ.

ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಹ ಇಲಾಖೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದೆ. ತಪ್ಪಿಸಸ್ಥರಿಗೆ ತಕ್ಕ ಶಿಕ್ಷೆ ಆಗಲಿದೆ. ಕಾನೂನು ಅದರದೆ ಆದ ಕ್ರಮ  ಕೈಗೊಳ್ಳಲಿದೆˌ ಹೀಗಿರುವಾಗ ಕಾಂಗ್ರೆಸ್ ಪಕ್ಷ ಪ್ರಕರಣದಲ್ಲಿ ಮೂಗು ತೂರಿಸುವ ಯಾವುದೇ ಪ್ರಮೇಯವಿಲ್ಲ. 

ಜಿಲ್ಲೆಯ ವಿದ್ಯಾರ್ಥಿನಿಯರ ಬಗ್ಗೆ ಕಾಳಜಿ  ತೋರಿಸಿರುವ ಬಿಜೆಪಿ ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅಮಾನವೀಯ ದೌರ್ಜನ್ಯದ ಬಗ್ಗೆ ಸಾಕ್ಷಿ ಸಮೇತ ಬಿಂಬಿತವಾದರೂ ಮೌನವಾಗಿರುವುದು ಸಂಶಯಕ್ಕೆ ಎಡೆಮಾಡಿದೆ. ಬಿಜೆಪಿಯ ಈ ನಿಲುವನ್ನು ನಾವು ಖಂಡಿಸುತ್ತೇವೆ. ಪ್ರಕರಣ ತನಿಖೆಯಲ್ಲಿ ಇರುವಾಗಲೇ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ ಹಾಗಾದರೆ ಮಣಿಪುರದ ಪ್ರಕರಣದ ಬಗ್ಗೆ ಬಿಜೆಪಿಯ ನಿಲುವು ಏನು ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಹೇಳಬೇಕಾಗಿದೆ. 

ಬಿಜೆಪಿ ಮುಖಂಡರಾದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ ರವರು ಉಡುಪಿ ಜಿಲ್ಲೆಗೆ ತರಾತುರಿಯಲ್ಲಿ ಆಗಮಿಸಿ ಪರಿಶೀಲನೆ ನಡೆಸಿ ಈ ಪ್ರಕರಣಕ್ಕೆ ಕೋಮು ಬಣ್ಣ ಬಳಿಯಬೇಡಿ, ಸಾಕ್ಷ್ಯವಿಲ್ಲದಿದ್ದರೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎನ್ನುವ ಹೇಳಿಕೆ ನೀಡಿರುವುದು ಯಾರ ತಿಳುವಳಿಕೆಗಾಗಿ ಎಂದು ಬಿಜೆಪಿ ಅಧ್ಯಕ್ಷರು ಸ್ಪಷ್ಟನೆ ನೀಡಬೇಕಾಗಿದೆ. ಸತ್ಯಾಂಶ ಹೊರಬರದೆ ಬಿಜೆಪಿಯ ಪ್ರತಿಭಟನೆ ರಂಪಾಟ ಯಾರನ್ನು ಒಲೈಸುವುದಕ್ಕಾಗಿ, ಯಾರನ್ನೋ ಓಲೈಸುವ ಭರದಲ್ಲಿ ತನಿಖೆಯ ದಾರಿ ತಪ್ಪಿಸುವ ಷಡ್ಯಂತ್ರವಿರ ಬಹುದೇ? ಸಮಾಜದಲ್ಲಿ ಶಾಂತಿ ಕದಡಿಸಲು ಹೊರಟಿರುವ ಬಿಜೆಪಿಯ ಈ ನಡೆ ಖಂಡನೀಯ  ಎಂದು ಉಡುಪಿ ಜಿಲ್ಲಾ ಅಧ್ಯಕ್ಷರಾದ ಅಶೋಕ್  ಕುಮಾರ್ ಕೊಡವೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿಕೆಗೆ  ಪ್ರತಿಕ್ರೀಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!