ಫ್ಯಾಸಿಸಮ್ ಸೋಲು ಜನಪರ ಚಳುವಳಿಗಳ ನಿರಂತರ ಹೋರಾಟದಿಂದ ಮಾತ್ರ ಸಾಧ್ಯ- ಶಿವಸುಂದರ್

ಉಡುಪಿ: ದೇಶದಲ್ಲಿ ಫ್ಯಾಸಿಸಮ್ ಸೋಲಿಸಲು ಜನಪರ ಚಳುವಳಿಗಳು ಸಕ್ರಿಯವಾಗಬೇಕೆಂದು ಖ್ಯಾತ ಚಿಂತಕರಾದ ಶಿವಸುಂದರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ ಜಿಲ್ಲೆ ಆಯೋಜಿಸಿದ “ಯುವ ಅಂದೋಲನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಫ್ಯಾಸಿಸಮ್ ಸೋಲಿಸಲು ಕಾಂಗ್ರೆಸ್’ನಿಂದ ಸಾಧ್ಯವಿಲ್ಲ. ಫ್ಯಾಸಿಸಮ್ ಮನಸ್ಥಿತಿಯನ್ನು ಹೋಗಲಾಡಿಸುವ ವ್ಯವಸ್ಥೆಯೇ ಈ ಸಮಸ್ಯೆಯ ಭಾಗವಾಗಿರುವುದು ವಾಸ್ತವಿಕತೆಯಾಗಿದ್ದು ಕಾಂಗ್ರೆಸ್ ಹೊರತಾದ ಚಳುವಳಿಯೊಂದನ್ನು ಸಕ್ರಿಯಗೊಳಿಸಬೇಕಾದ ಅಗತ್ಯವಿದೆ. ಈ ಚಳುವಳಿಗಳಿಂದ ತಕ್ಷಣ ಫಲಿತಾಂಶ ಹೊರ ಬಾರದಿದ್ದರೂ ದಶಕಗಳ ನಿರಂತರ ಪ್ರಯತ್ನದಿಂದ ಜನರ ಮನಸ್ಸಿನಲ್ಲಿ ಗಾಢವಾಗಿ ನೆಲೆಯೂರಿರುವ ಕೋಮುವಾದವನ್ನು ದೂರೀಕರಿಸಲು ಖಂಡಿತ ಸಾಧ್ಯ ಎಂದರು.

ದಶಕಗಳ ಹಿಂದೆ ಕನಿಷ್ಠ ವೋಟ್ ಶೇರಿಂಗ್ ಪಡೆದ ಬಿಜೆಪಿ ಇಂದು ದೇಶದಲ್ಲಿ 36 % ಮತ ಶೇರ್ ಪಡೆದಿದ್ದರೆ ಅದರ ಹಿಂದೆ ನೂರು ವರ್ಷದ ಪರಿಶ್ರಮ ಇದೆ. ಈ ಮುಂಚೆ ಜನರ ಬಳಿ ಚಳುವಳಿಗಳು ಇದ್ದವು. ದಲಿತ ಚಳುವಳಿ, ಕಾರ್ಮಿಕ ಚಳುವಳಿ, ಮುಸ್ಲಿಮರ ವಿವಿಧ ಚಳುವಳಿಗಳು ಸಕ್ರಿಯವಾಗಿದ್ದ ಕಾರಣ ಜನ ಫ್ಯಾಸಿಸಮ್ ಅಜೆಂಡಾಗಳಿಗೆ ಬಲಿಯಾಗುದಂತೆ ಚಳುವಳಿಗಳ ಜನರು ತಡೆಯುವಲ್ಲಿ ಸಫಲರಾಗುತ್ತಿದ್ದರು. ಇಂದು ಚಳುವಳಿಗಳ ವಿಭಜನೆ ಮತ್ತು ದುರ್ಬಲಗೊಂಡ ಕಾರಣ ಫ್ಯಾಸಿಸಮ್ ಬಲಿಷ್ಠವಾಗಿ ಬೆಳೆಯುತ್ತಿದೆ. ಈಗ ಫ್ಯಾಸಿಸಮ್’ನ ಹಿಂದೆ ಕಾರ್ಪೊರೇಟ್ ಶಕ್ತಿಗಳು ಕೂಡ ಇರುವುದರಿಂದ ಇದನ್ನು ಸೋಲಿಸಲು ನಿರಂತರ ಹೋರಾಟದ ಅವಶ್ಯಕತೆ ಇದೆ ಎಂದು ಹೇಳಿದರು.

ನಾವುಗಳು ಇಂದು ಚಳುವಳಿಗಳನ್ನು ನಮ್ಮ ಜೀವನದ ಆದ್ಯತೆ ಮಾಡಿಕೊಂಡರೆ ಭವಿಷ್ಯದ ಜನರಿಗೆ ಒಂದೊಳ್ಳೆಯ ಸಮಾಜ ನಿರ್ಮಿಸಿ, ಬಿಟ್ಟು ಹೋಗಲು ಸಾಧ್ಯವಾಗುತ್ತದೆ. ಈ ಫ್ಯಾಸಿಸಮ್’ನ್ನು ಸಂವಿಧಾನದ ಪರಿಧಿಯಲ್ಲಿ ಅರ್ಥೈಸಿಕೊಂಡು ಜನರಿಗೆ ವಿವಿಧ ಕಾರ್ಯಕ್ರಮಗಳ ಮುಖಾಂತರ ತಲುಪಬೇಕಾಗಿದೆ. ನಿರಂತರ ಸುಳ್ಳಿನಿಂದ ಜನರಲ್ಲಿ ದ್ವೇಷ ಬಿತ್ತುವ ಫ್ಯಾಸಿಸಮ್ ಶಕ್ತಿಗಳ ಹಾಗೆ ನಾವು ನಿರಂತರ ಸತ್ಯ ತಲುಪಿಸುವ ಮುಖಾಂತರ ಜನರ ಮನಸ್ಸು ತೆರೆಯಲು ಸಾಧ್ಯವಾಗುತ್ತದೆ. ಇವತ್ತು ದೇಶದಲ್ಲಿ ‌ಮುಸ್ಲಿಮರು ಫ್ಯಾಸಿಸ್ಟ್ ಶಕ್ತಿಗಳ ಕುರಿತು ಹೆಚ್ಚು ಅರಿವು ಮೂಡಿಸಿಕೊಂಡಿದ್ದಾರೆ. ಮುಸ್ಲಿಮೇತರರು ಈ ಕುರಿತು ಚಿಂತಿಸಿ ತಿರಸ್ಕರಿಸಬೇಕಾದ ಅಗತ್ಯವಿದೆ. ಎಲ್ಲರನ್ನೊಳಗೊಂಡ ಜನಪರ ಚಳುವಳಿಯಿಂದ ಖಂಡಿತ ಈ ಫ್ಯಾಸಿಸಮ್’ನ್ನು ಸೋಲಿಸಲು ಸಾಧ್ಯವೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಜಿಲ್ಲಾಧ್ಯಕ್ಷರಾದ ನಬೀಲ್ ಗುಜ್ಜರ್’ಬೆಟ್ಟು, ಶುಐಬ್ ಮಲ್ಪೆ, ಸರ್ಫರಾಜ್ ಮನ್ನಾ,ಎಸ್.ಐ.ಓನ ಆಯಾನ್ ಮಲ್ಪೆ, ಜಿ.ಐ.ಓನ ನೂಝ್ಲಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!