ಯಾರೂ ವಿದ್ಯುತ್‌ ಬಿಲ್‌ ಪಾವತಿಸಬಾರದು, ಸಂಪರ್ಕ ಕಡಿತ ಗೊಳಿಸಿದರೆ ನಾವಿದ್ದೇವೆ – ನಳಿನ್ ಕಟೀಲ್

ಮಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್‌ ಸರ್ಕಾರ ಷರತ್ತುಗಳನ್ನು ವಿಧಿಸುವ ಮೂಲಕ ಜನತೆಗೆ ಚುನಾವಣೆ ವೇಳೆ ನೀಡಿದ ಭರವಸೆಯಂತೆ ನಡೆದುಕೊಂಡಿಲ್ಲ. ಉಚಿತ ವಿದ್ಯುತ್‌ ಯೋಜನೆಯೂ ಸುಳ್ಳಾಗಿದ್ದು, ಜನತೆ ಯಾರೂ ಕರೆಂಟ್‌ ಬಿಲ್‌ ಪಾವತಿಸ ಬಾರದು, ಒಂದು ವೇಳೆ ವಿದ್ಯುತ್‌ ಸಂಪರ್ಕ ಕಡಿತ ಗೊಳಿಸಿದರೆ ನಾವಿದ್ದೇವೆ, ಜನರೊಂದಿಗೆ ಸೇರಿ ಬಿಜೆಪಿ ಹೋರಾಟ ನಡೆಸಲಿದೆ ಎಂದು ದ.ಕ.ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಶನಿವಾರ ಮಂಗಳೂರಿನಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಉಚಿತ ಪ್ರಯಾಣ, ಉಚಿತ ವಿದ್ಯುತ್‌, ಉಚಿತ ಗೃಹಲಕ್ಷ್ಮಿ ಸೇರಿದಂತೆ ಎಲ್ಲ ಗ್ಯಾರಂಟಿಗಳಿಗೆ ಶರ್ತ ವಿಧಿಸಿ ಜಾರಿಗೊಳಿಸುತ್ತಿದ್ದಾರೆ. ಈಗ ವಿದ್ಯುತ್‌ ಬಿಲ್‌ ಕೂಡ ದುಪ್ಪಟ್ಟು ಬರಲಾರಂಭಿಸಿದೆ. ಇದರಿಂದ ಜನತೆ ಆಕ್ರೋಶಗೊಂಡಿದ್ದು, ಜನತೆಯ ಜತೆ ನಾವಿದ್ದೇವೆ. ಚುನಾವಣೆ ವೇಳೆ ಯಾವುದೇ ಮಾರ್ಗಸೂಚಿಯನ್ನು ಹೊಂದದೆ ಎಲ್ಲರಿಗೆ ಉಚಿತ ಎಂದು ಸಿದ್ದರಾಮಯ್ಯ ಹೇಳಿ ಈಗ ಜನರನ್ನು ವಂಚಿಸುವುದು ಸರಿಯಲ್ಲ ಎಂದರು.

ದ.ಕ. ಸೇರಿದಂತೆ ಕರಾವಳಿಯಲ್ಲಿ ಖಾಸಗಿ ಬಸ್‌ಗಳಲ್ಲಿ ಮಹಿಳೆಯರು ಸಂಚರಿಸುತ್ತಿದ್ದಾರೆ. ಸರ್ಕಾರ ಉಚಿತ ಪ್ರಯಾಣ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ಅನ್ವಯಿಸಬೇಕು. ಅದು ಬಿಟ್ಟು ಜನತೆಗೆ ಯಾಕೆ ಅನ್ಯಾಯ ಮಾಡುತ್ತೀರಿ? ಖಾಸಗಿ ಬಸ್‌ನವರು ಏನು ತೊಂದರೆ ಮಾಡಿದ್ದಾರೆ? ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡದಿದ್ದರೆ ಬಿಜೆಪಿ ಹೋರಾಟ ನಡೆಸಲಿದೆ ಎಂದರು. ಕಾಂಗ್ರೆಸ್‌ ಸರ್ಕಾರಕ್ಕೆ ಗ್ಯಾರಂಟಿ ಇಲ್ಲ, ಹಾಗಿರುವಾಗ ಅದರ ಯೋಜನೆಗಳು ಬಗ್ಗೆ ಯಾವುದೇ ಗ್ಯಾರಂಟಿ ಹೇಳುವಂತಿಲ್ಲ. ಕಾಂಗ್ರೆಸ್‌ನಲ್ಲಿ ಗುಂಪುಗಳಾಗಿದ್ದು, ಯಾವ ಗುಂಪು ಯಾವಾಗ ಹೊಡೆದಾಡುತ್ತದೋ ಎಂದು ಹೇಳುವಂತಾಗಿದೆ ಎಂದರು.

ಯುವ ಉತ್ಸವ ಮೂಲಕ ಭಾರತ್‌ ಜೋಡಣೆ: ಮುಂದಿನ 25 ವರ್ಷಗಳ ದೂರದೃಷ್ಟಿಯನ್ನು ಇರಿಸಿಕೊಂಡು ವಿದ್ಯಾರ್ಥಿಗಳು ಭಾರತಕ್ಕಾಗಿ ಬದುಕುವ ಸಂಕಲ್ಪ ಮಾಡಬೇಕು, ರಾಷ್ಟ್ರೀಯ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು. ಯುವ ಉತ್ಸವ ಮೂಲಕ ಭಾರತ ಜೋಡಿಸುವ ಕೆಲಸ ಆಗಬೇಕು ಎಂದು ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಮಂಗಳೂರು ಮಿನಿ ಪುರಭವನದಲ್ಲಿ ಶನಿವಾರ ನೆಹರೂ ಯುವ ಕೇಂದ್ರ ವತಿಯಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಂಗಳೂರು ವಿವಿ ಕಾಲೇಜು, ಎನ್‌ಎಸ್‌ಎಸ್‌ ಘಟಕ, ಡಾ.ದಯಾನಂದ ಪೈ, ಪಿ.ಸತೀಶ್‌ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಜಿಲ್ಲಾ ಯೂತ್‌ ಫೆಡರೇಷನ್‌ ಸಹಕಾರದಲ್ಲಿ ಏರ್ಪಡಿಸಿದ ‘ಯುವ ಉತ್ಸವ-2023’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರಿಸ್ತ ಪೂರ್ವ, ಕ್ರಿಸ್ತಶಕ, ಸ್ವಾತಂತ್ರ್ಯ ಪೂರ್ವ ಸ್ವಾತಂತ್ರ್ಯಾ ನಂತರದ ಬಳಿಕ ಈಗ 2014ರ ಪೂರ್ವ ಹಾಗೂ 2014ರ ನಂತರದ ಭಾರತ ಎಂದು ಜಗತ್ತೇ ಕರೆಯುವಂತಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಯುವ ಪೀಳಿಗೆ ಮೇಲೆ ವಿಶ್ವಾಸ ಇರಿಸಿದ್ದು, ಇದು ಅಮೃತ ಕಾಲದ ಭಾರತವಾಗಲಿದೆ. ಯುವ ಪೀಳಿಗೆಯೇ ದೇಶದ ಶಕ್ತಿ ಆಗಿದೆ ಎಂದರು. ಅಧ್ಯಕ್ಷತೆ ವಹಿಸಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌, ನೈಜ ಇತಿಹಾಸವನ್ನು ಶಾಲೆಗಳಲ್ಲಿ ತಿಳಿಸುವ ಕೆಲಸವಾಗಬೇಕು. ಇಲ್ಲದಿದ್ದರೆ ಈಗಿನ ಪೀಳಿಗೆಗೆ ನಿಜ ಇತಿಹಾಸ ಗೊತ್ತಿರುವುದಿಲ್ಲ.

ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ ದ.ಕ. ಜಿಲ್ಲೆಯಲ್ಲಿ 1834ರಲ್ಲಿ ನಡೆದಿದೆ. ಇಂತಹ ಅನೇಕ ವಿಚಾರಗಳು ಇಂದು ಶಿಕ್ಷಣದಲ್ಲಿ ಬರಬೇಕಾಗಿದೆ ಎಂದರು. ಎನ್‌ವೈಕೆಎಸ್‌ ಬೆಂಗಳೂರಿನ ಪ್ರಾದೇಶಿಕ ಕೇಂದ್ರ ನಿರ್ದೇಶಕ ಎಂ.ಎನ್‌.ನಟರಾಜ್‌, ಜಿಲ್ಲಾ ಯುತ್‌ ಅಧಿಕಾರಿ ಯಶವಂತ್‌ ಯಾದವ್‌, ಮಾಜಿ ಅಧಿಕಾರಿ ಸಿಜೆಎಫ್‌ ಡಿಸೋಜಾ, ಜಿಲ್ಲಾ ಯೂತ್‌ ಫೆಡರೇಷನ್‌ ಅಧ್ಯಕ್ಷ ಸುರೇಶ್‌ ರೈ ಸೂಡಿಮುಳ್ಳು, ಕಾರ್‌ಸ್ಟ್ರೀಟ್‌ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಜಯಕರ್‌ ಭಂಡಾರಿ ಇದ್ದರು.

2 thoughts on “ಯಾರೂ ವಿದ್ಯುತ್‌ ಬಿಲ್‌ ಪಾವತಿಸಬಾರದು, ಸಂಪರ್ಕ ಕಡಿತ ಗೊಳಿಸಿದರೆ ನಾವಿದ್ದೇವೆ – ನಳಿನ್ ಕಟೀಲ್

Leave a Reply

Your email address will not be published. Required fields are marked *

error: Content is protected !!