ಸ್ಥಗಿತಗೊಂಡಿರುವ ಮತ್ತು ಹೆಚ್ಚುವರಿ ಸರಕಾರಿ ಬಸ್ ಓಡಾಟಕ್ಕೆ ಸಿಐಟಿಯು ಆಗ್ರಹ

ಉಡುಪಿ: ಕರ್ನಾಟಕ ರಾಜ್ಯಾದ್ಯಂತ ಜೂನ್ 1 ರಿಂದ ಸರಕಾರಿ ಕೆಎಸ್ಆರ್ಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ. ಆದರೆ ಕೆಎಸ್ಆರ್ಟಿಸಿ ಬಸ್ಸ್ ಕೊರೋನಾ ಕಾಲದ ನಂತರ ತನ್ನ ಸಂಚಾರವನ್ನು ಸ್ಥಗಿತಗೊಳಿಸಿದ ಕಾರಣ ಸೇವೆಯಲ್ಲಿ ಬಹಳಷ್ಟು ವ್ಯತ್ಯಯ ಕಂಡು ಬಂದು ಪ್ರಯಾಣಿಕರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಈ ಕುರಿತು ಮನವಿ ಸಲ್ಲಿಸಿದ್ದರೂ ಖಾಸಗಿ ಬಸ್ ಮಾಲಕರ ಒತ್ತಡದಿಂದ ಜಾರಿ ಆಗಿಲ್ಲ. ಏರಿಸಿದ ಬಸ್ ದರವನ್ನು ಕಡಿಮೆ ಮಾಡಿಲ್ಲ. ಆದ್ದರಿಂದ ಸರಕಾರದಿಂದ ಮಂಜೂರಾಗಿ ಪರವಾನಿಗೆ ಪಡೆದ ಎಲ್ಲಾ ಸರಕಾರಿ ಬಸ್ಸು ಸಂಚಾರ ಸೇವೆಯನ್ನು ಮುಂದುವರಿಸಲು ಈ ಕೂಡಲೇ ಕ್ರಮಕೈಗೊಳ್ಳಬೇಕೆಂದು ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಕರ್ನಾಟಕ ರಾಜ್ಯ ಸರಕಾರವನ್ನು, ಸಾರಿಗೆ ಸಚಿವರನ್ನು ಒತ್ತಾಯಿಸಿದೆ.

ನರ್ಮ್ ಯೋಜನೆಯಡಿಯಲ್ಲಿ ಉಡುಪಿಯಲ್ಲಿ ಸುಮಾರು 55 ರಷ್ಟು ನಗರ ಸಾರಿಗೆ ಬಸ್ಸುಗಳು ಸಂಚಾರ ಸೇವೆ ಒದಗಿಸಲು ಮಂಜೂರಾಗಿದ್ದವು. ಖಾಸಗೀ ಬಸ್ಸು ಮಾಲಕರ ವಿರೋಧದ ನಡುವೆಯೂ ಆಶಾದಾಯಕ ಸೇವೆಯನ್ನು ಸಲ್ಲಿಸಿದೆ. ಕೊರೋನಾ ಕಾಲದಲ್ಲಿ ಸ್ಥಗಿತಗೊಂಡಿರುವ ಸರಕಾರಿ ಬಸ್ ಸಂಚಾರ ಸೇವೆಯು ಮತ್ತೆ ಹಿಂದಿನ ರೀತಿಯಲ್ಲಿ ನೀಡಲೇ ಇಲ್ಲ. ಸರಕಾರಿ ನರ್ಮ್ ನಗರ ಸಾರಿಗೆ ಬಸ್ಸು ಮತ್ತು ಗ್ರಾಮೀಣ ಭಾಗದ ಸರಕಾರಿ ಬಸ್ ಸಂಚಾರ ಸೇವೆಯಲ್ಲಿ ಅರ್ಧಕ್ಕರ್ಧ ವ್ಯತ್ಯಯ ಉಂಟಾಗಿದೆ. ಜಿಲ್ಲೆಯಲ್ಲಿ ಖಾಸಗೀ ಬಸ್ಸುಗಳ ಭರಾಟೆಯ ನಡುವೆ ಸರಕಾರಿ ಬಸ್ಸುಗಳು ಮೂಲೆಗುಂಪಾಗ ತೊಡಗಿದೆ. ಇದರಿಂದಾಗಿ ಬಹುತೇಕ ಕಡಿಮೆ ಆದಾಯಕ್ಕೆ ದುಡಿಯುವ ಜನ ಸಾಮಾನ್ಯರು ಸಮಸ್ಯೆಯನ್ನು ಅನುಭವಿಸುವಂತಾಗಿದೆ. ಜೂನ್ 1ರಿಂದ ಸರಕಾರ ಘೋಷಿಸಿದ ಕೆಎಸ್ಆರ್ಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆಯು ಜಿಲ್ಲೆಯ ಮಹಿಳೆಯರಿಗೂ ಸಿಗುವಂತಾಗಬೇಕು.

ಬೀಡಿ ಉದ್ದಿಮೆ ನೆಲಕ್ಕಚ್ಚಿದ ನಂತರ ಈಗ ಮಹಿಳೆಯರೂ ದೊಡ್ಡ ಸಂಖ್ಯೆಯಲ್ಲಿ ಸಣ್ಣ ಪುಟ್ಟ ಅಂಗಡಿ ಮುಗ್ಗಟ್ಟುಗಳಲ್ಲಿ, ಬಟ್ಟೆಯಂಗಡಿಗಳಲ್ಲಿ, ಆಸ್ಪತ್ರೆ, ಕಾಲೇಜುಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದು ಅಂತ ಮಹಿಳೆಯರಿಗೆ ಸರಕಾರದ ಈ ಯೋಜನೆಯು ಅನುಕೂಲಕರವಾಗಲಿದೆ.

ಆದ್ದರಿಂದ ಉಡುಪಿ ಜಿಲ್ಲಾದ್ಯಂತ ಸ್ಥಗಿತಗೊಂಡಿರುವ ಕೆಎಸ್ಏರ್ಟಿಸಿ ಸರಕಾರಿ ಬಸ್ಸ್ ತನ್ನ ಸಂಚಾರ ಸೇವೆಯನ್ನು ಈ ಕೂಡಲೇ ಮುಂದುವರಿಸಲು ಕ್ರಮ ಕೈಗೊಳ್ಳಬೇಕೆಂದು ಮತ್ತು ಜನರ ಬೇಡಿಕೆಯ ಅನುಗುಣವಾಗಿ ಮಂಜೂರಾಗದೆ ಬಾಕಿ ಇರುವ ಪ್ರದೇಶಗಳಿಗೂ ಶೀಘ್ರವೇ ಬಸ್ ಸಂಚಾರ ಸೇವೆ ಒದಗಿಸಲು ಸಿಐಟಿಯು ಉಡುಪಿ ಜಿಲ್ಲಾ ಸಮಿತಿಯು ಕರ್ನಾಟಕ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

Leave a Reply

Your email address will not be published. Required fields are marked *

error: Content is protected !!