ಉಡುಪಿ- ಮಣಿಪಾಲ ನಾಲ್ಕು ಕಡೆ ಒಂದೇ ತಂಡದಿಂದ ದರೋಡೆ
ಮಣಿಪಾಲ: (ಉಡುಪಿ ಟೈಮ್ಸ್ ವರದಿ) ಶನಿವಾರ ಮುಂಜಾನೆ ಉಡುಪಿ ಮತ್ತು ಮಣಿಪಾಲದ ನಾಲ್ಕು ಕಡೆಗಳಲ್ಲಿ ದರೋಡೆ ನಡೆಸಿರುವುದು ಒಂದೇ ತಂಡ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಈ ಬಗ್ಗೆ ಉಡುಪಿ ನಗರ ಠಾಣೆ ಮತ್ತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀಲಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳಿಬ್ಬರು ಒಬ್ಬಂಟಿಯಾಗಿ ಸಂಚರಿಸುತ್ತಿದ್ದವರನ್ನು ಗುರಿ ಮಾಡಿಕೊಂಡು ಶನಿವಾರ ಬೆಳಗಿನ ಜಾವ ದುಷ್ಕರ್ತ್ಯಕ್ಕೆ ಇಳಿದಿದ್ದಾರೆ.
ಮೊದಲು ಯುವಕರಿಬ್ಬರು ಬೆಳಿಗ್ಗೆ 4.30ರ ಸುಮಾರಿಗೆ ಇಂದ್ರಾಳಿ ಪೆಟ್ರೋಲ್ ಬಂಕ್ ಸಮೀಪ ಬೆಂಗಳೂರಿನಿಂದ ರೈಲಿನಲ್ಲಿ ಬಂದ ಪ್ರಯಾಣಿಕ ಧರಣೇಂದ್ರ ತನ್ನ ಮನೆಗೆ ಹೋಗುತ್ತಿದ್ದವರನ್ನು ತಡೆದು ನಿಲ್ಲಿಸಿ ಬೆದರಿಸಿದ್ದರು. ಆಗ ಯುವಕರ ಬೆದರಿಕೆಗೆ ಜಗ್ಗದಿದ್ದಾಗ ಸುಲಿಗೆಕೋರರು ಸ್ಕ್ರೂಡ್ರೈವ್‌ನಿಂದ ಚುಚ್ಚಿದ್ದಾರೆ. ಇದರಿಂದ ಹೆದರಿದ ಇವರು ತನ್ನಲ್ಲಿದ್ದ ಮೊಬೈಲ್ ಹಾಗೂ ಒಂದುವರೆ ಸಾವಿರ ರೂ. ನಗದು ನೀಡಿದ್ದಾರೆ.
ಅಲ್ಲಿಂದ ಸುಲಿಗೆಕೋರರು ಕುಕ್ಕಿಕಟ್ಟೆ ಡಯಾನ ಟಾಕೀಸ್ ಬಳಿ ಮಲ್ವೆಗೆ ಮೀನು ಖರೀದಿಸಲು ಹೋಗುತ್ತಿದ್ದ ನಿತೀಶ್ ಅವರನ್ನು ತಡೆದು ಆಯುಧವನ್ನು ತೋರಿಸಿ ಅವರ ಬಳಿ ಇದ್ದ ಮೊಬೈಲ್ ಹಾಗೂ ಹತ್ತೊಂಬ್ಬತ್ತು ಸಾವಿರ ರೂ. ನಗದು ದೋಚಿದ್ದಾರೆ.
ಬಳಿಕ ಸುಲಿಗೆಕೋರರು ಅಲೆವೂರು ಗುಡ್ಡೆಯಂಗಡಿ ಜಂಕ್ಷನ್ ಬಳಿ ಬೆಳಗಿನ ಜಾವ 5.15ರ ಸುಮಾರಿಗೆ ಮಣಿಪಾಲ ಪ್ರೆಸ್‌ನಲ್ಲಿ ರಾತ್ರಿ ಪಾಳಿ ಮುಗಿಸಿ ಉದ್ಯಾವರದ ಮನೆಗೆ ತೆರಳುತ್ತಿದ್ದ ಯತೀಂದ್ರರನ್ನು ತಡೆದು ನಿಲ್ಲಿಸಿ ಆಯುಧ ತೋರಿಸಿ ಮೊಬೈಲ್ ದೋಚಲು ಪ್ರಯತ್ನ ಪಟ್ಟರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯತೀಂದ್ರರ ಎದೆ ಮತ್ತು ಇತರ ಭಾಗಗಳಿಗೆ ಇರಿದು ಪರಾರಿಯಾಗಿದ್ದಾರೆ. ಇದೇ ತಂಡ ಈಶ್ವರ ನಗರದಲ್ಲೂ ವ್ಯಕ್ತಿಯೊರ್ವರನ್ನು ದರೋಡೆ ಮಾಡಿದೆ ಎಂದು ತಿಳಿದು ಬಂದಿದೆ.
ಮಣಿಪಾಲ ಮತ್ತು ಉಡುಪಿ ಪೊಲೀಸರು ತನಿಖೆ ಕೈಗೆತ್ತಿಕೊಂಡು ಹಲವರನ್ನು ವಿಚಾರಣೆಗೆ ಒಳಪಡಿಸಿದ್ದು, ಆರೋಪಿಗಳ ಶ್ರೀಘ್ರ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.