ಉಡುಪಿಯಲ್ಲಿ ಯಶ್ಪಾಲ್ ಸುವರ್ಣ ಗೆಲುವು ಹಿಂದುತ್ವದ ಗೆಲುವು- ಶ್ರೀಕಾಂತ ಶೆಟ್ಟಿ

ಮಲ್ಪೆ: ಹಿಂದುತ್ವದ ನೆಲೆಯಲ್ಲಿ ರಾಷ್ಟ್ರೀಯ ವಾದಿ ನೆಲೆಗಟ್ಟಿನಲ್ಲಿ ಬೆಳೆದು ಬಂದ ಯುವ ನಾಯಕ ಯಶ್ಪಾಲ್ ಸುವರ್ಣ ಅವರ ಈ ಬಾರಿಯ ಗೆಲುವು ಹಿಂದುತ್ವದ ಗೆಲುವಾಗಲಿದೆ ಎಂದು ಹಿಂದೂ ಸಂಘಟನೆಯ ಮುಖಂಡ ಶ್ರೀಕಾಂತ್ ಶೆಟ್ಟಿ ಹೇಳಿದರು.

ತೆಂಕನಿಡಿಯೂರು ಮತ್ತು ಬಡಾನಿಡಿಯೂರು ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಇವರು, ಹಿಂದೂ ವಿರೋಧಿ ಮನಸ್ಥಿತಿಯ ಕಾಂಗ್ರೆಸ್ ಪಕ್ಷ, ಹಿಂದೂ ಸಮಾಜದ ರಕ್ಷಣೆಗೆ ಪಣತೊಟ್ಟ ಬಜರಂಗದಳ ಸಂಘಟನೆಯನ್ನು ನಿಷೇಧಿಸಲು ಹೊರಟ ಈ ಕಾಲಘಟ್ಟದಲ್ಲಿ ಬಜರಂಗ ದಳದ ಜಿಲ್ಲಾ ಸಂಚಾಲಕರಾಗಿದ್ದ, ರಾಜಕೀಯ, ಸಹಕಾರ, ಧಾರ್ಮಿಕ ಕ್ಷೇತ್ರದಲ್ಲೂ ನಾಯಕರಾಗಿ ಗುರುತಿಸಿಕೊಂಡಿರುವ ದಿಟ್ಟ ನಿಲುವಿನ ಯಶ್ಪಾಲ್ ಸುವರ್ಣ ಈ ಬಾರಿ ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಉಡುಪಿಯ ಜನತೆ ಈ ಬಾರಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಗೆ ತಕ್ಕ ಉತ್ತರ ನೀಡುವಂತೆ ಕರೆ ನೀಡಿದರು.

ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸಿನೊಂದಿಗೆ ಡಾ| ವಿ. ಎಸ್. ಆಚಾರ್ಯ ಮಾರ್ಗದರ್ಶನದಲ್ಲಿ ಬೆಳೆದು ಬಂದ ಯಶ್ಪಾಲ್ ಸುವರ್ಣ ಅವರು ಉಡುಪಿ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆ ಎಂದರು.

ಶಾಸಕ ರಘುಪತಿ ಭಟ್ ಮಾತನಾಡಿ, ಶಾಸಕನಾಗಿ ತೆಂಕನಿಡಿಯೂರು ಮತ್ತು ಬಡಾನಿಡಿಯೂರು ಗ್ರಾಮಗಳಿಗೆ ಗರಿಷ್ಠ ಅನುದಾನ ಒದಗಿಸಿ ಅಭಿವೃದ್ಧಿ ಕಾಮಗಾರಿ ನಡೆಸಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಅವರನ್ನು ಗೆಲ್ಲಿಸುವ ಮೂಲಕ ಮುಂದಿನ ದಿನಗಳಲ್ಲಿ ಗ್ರಾಮದ ನಿರಂತರ ಅಭಿವೃದ್ಧಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಬಿಜೆಪಿಗೆ ಮತ್ತೊಮ್ಮೆ ಅವಕಾಶದ ವಿಶ್ವಾಸ
ಮನೆ ಮನೆಗೆ ಗ್ಯಾರಂಟಿ ಕಾರ್ಡ್ ತಲುಪಿಸಿ ಮತದಾರರನ್ನು ದಿಕ್ಕು ತಪ್ಪಿಸಲು ಮುಂದಾಗಿರುವ ಕಾಂಗ್ರೆಸ್, ಇದೀಗ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧಿಸುವ ಬಗ್ಗೆ ಉಲ್ಲೇಖಿಸಿದ್ದು, ಆ ಮೂಲಕ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನಿಲುವು ಇದೀಗ ಬಯಲಾಗಿದೆ. ಕ್ಷೇತ್ರದ ಅಭಿವೃದ್ಧಿ, ಹಿಂದುತ್ವ ಮತ್ತು ರಾಷ್ಟ್ರವಾದಿ ಚಿಂತನೆ ಆಧಾರದಲ್ಲಿ ಈ ಬಾರಿ ಬಿಜೆಪಿ ಚುನಾವಣೆ ಎದುರಿಸುತ್ತಿದ್ದು, ಕ್ಷೇತ್ರದ ಜನತೆ ಮತ್ತೊಮ್ಮೆ ಬಿಜೆಪಿಗೆ ಅವಕಾಶ ನೀಡುವ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಹೇಳಿದರು.

ಸಮೃದ್ಧ ಸುಂದರ ಉಡುಪಿ
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಮಾತನಾಡಿ, ಕೀರ್ತಿ ಶೇಷ ಡಾ| ವಿ. ಎಸ್. ಆಚಾರ್ಯ ಅವರಿಂದ ಪ್ರಾರಂಭಗೊಂಡ ನವ ನಿರ್ಮಾಣದ ಉಡುಪಿಯ ಅಭಿವೃದ್ಧಿಯ ಶಕೆಯನ್ನು ಶಾಸಕ ಕೆ. ರಘುಪತಿ ಭಟ್ ಮುಂದುವರಿಸಿ ಇನ್ನು ಮುಂದೆ ಯಶಪಾಲ್ ಸುವರ್ಣ ನೇತೃತ್ವದಲ್ಲಿ ಸಮೃದ್ಧ ಸುಂದರ ಉಡುಪಿಯ ಕನಸು ನನಸಾಗಲಿದೆ ಎಂದು ಆಶಿಸಿದರು.

ಸಂಸ್ಕೃತಿಯ ಗೆಲುವು
ಯಶ್ಪಾಲ್ ಸುವರ್ಣ ಗೆಲುವಿನಿಂದ ಗೋವುಗಳ ರಕ್ಷಣೆ ಸಾಧ್ಯ. ಮತಾಂತರ ನಿಷೇಧದ ಲಕ್ಷಣ, ಹೊಸ ಹೊಸ ಚಿಂತನೆ ಮಾಡಲು ಸಾಧ್ಯ. ಕೇವಲ ಮೋದಿ ಭಾವಚಿತ್ರ ತೋರಿಸಿ, ಅವರ ಹೆಸರನ್ನು ಹೇಳುತ್ತಾ ಮತ ಪಡೆಯುವ ಬದಲಾಗಿ ಅದೇ ರೀತಿ ಪ್ರಾಮಾಣಿಕತೆಯಿಂದ ನಡೆಯುವ ವ್ಯಕ್ತಿ ಯಶಪಾಲ್.

ದೇಶಭಕ್ತಿ ರೀತಿಯಲ್ಲಿ ಯಶಪಾಲ್ ಅವರನ್ನು ಗೆಲ್ಲಿಸಿದರೆ ಉಡುಪಿ ಭ್ರಷ್ಟಾಚಾರ ರಹಿತ, ಆರೋಗ್ಯವಂತ ಉಡುಪಿ ಆಗುವ ಸಾಧ್ಯತೆ ಇದೆ ಎಂದು ನಗರಸಭಾ ಸದಸ್ಯ ವಿಜಯ ಕೊಡವೂರು ಹೇಳಿದರು.

ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ತೆಂಕನಿಡಿಯೂರು ಗ್ರಾ. ಪಂ. ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಅರುಣ್ ಜತ್ತನ್, ಬಡಾನಿಡಿಯೂರು ಗ್ರಾ. ಪಂ. ಅಧ್ಯಕ್ಷ ಪ್ರಭಾಕರ ತಿಂಗಳಾಯ, ತಾ. ಪಂ. ಮಾಜಿ ಉಪಾಧ್ಯಕ್ಷ ಶರತ್ ಬೈಲಕೆರೆ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ವಿಜಯ್ ಪ್ರಕಾಶ್ ಮೊದಲಾದವರಿದ್ದರು.

Leave a Reply

Your email address will not be published. Required fields are marked *

error: Content is protected !!