ಸರ್ಕಾರ ಅಪರಾಧಿಗಳನ್ನು ರಕ್ಷಿಸುತ್ತಿದೆಯೇ?- ಕುಸ್ತಿಪಟುಗಳ ಪ್ರತಿಭಟನೆಗೆ ಪ್ರಿಯಾಂಕಾ ಗಾಂಧಿ ಬೆಂಬಲ

ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ ಭೂಷಣ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿ ಮಹಿಳಾ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಬೆಂಬಲ ನೀಡಿದ್ದಾರೆ.

ಕುಸ್ತಿಪಟುಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನಾಯಕಿ, ಈ ವಿಚಾರದಲ್ಲಿ ಅಪರಾಧಿಗಳನ್ನು ರಕ್ಷಿಸಲು ಸರ್ಕಾರ ಬಯಸುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.

ದೇಶದ ಗೌರವವನ್ನು ಹೆಚ್ಚಿಸುವ ಕ್ರೀಡಾಪಟುಗಳ ಮನವಿಯನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, “ಬಿಜೆಪಿ ಮತ್ತು ಅದರ ನಾಯಕರ ದುರಹಂಕಾರ”ದಿಂದ ಖ್ಯಾತ ಕ್ರೀಡಾಪಟುಗಳ ಧ್ವನಿ ಹತ್ತಿಕ್ಕಲಾಗುತ್ತದೆ ಎಂದು ಆರೋಪಿಸಿದ್ದಾರೆ.

ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ ಪ್ರಿಯಾಂಗಾ ಗಾಂಧಿ, ಕ್ರೀಡಾ ಪಟುಗಳು ದೇಶದ ಹೆಮ್ಮೆ, ಅವರು ಹಲವು ಕಷ್ಟಗಳ ನಡುವೆಯೂ ಪದಕಗಳನ್ನು ಗೆದ್ದಾಗ “ಅವರ ಗೆಲುವು ನಮ್ಮ ಗೆಲುವು” ಎಂದು ಹೇಳಿ ಇಡೀ ದೇಶ ಸಂಭ್ರಮಿಸುತ್ತದೆ. 

“ಮಹಿಳಾ ಆಟಗಾರ್ತಿಯರ ಗೆಲುವು ಉಳಿದವರಿಗಿಂತ ದೊಡ್ಡದಾಗಿದೆ. ಅವರು ಸಂಸತ್ತಿನ ಮುಂದಿನ ರಸ್ತೆಯಲ್ಲಿ ಕಣ್ಣೀರಿನೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ದೀರ್ಘಕಾಲದಿಂದ ನಡೆಯುತ್ತಿರುವ ಶೋಷಣೆಯ ವಿರುದ್ಧದ ಅವರ ಅಳಲನ್ನು ಯಾರೂ ಕೇಳುತ್ತಿಲ್ಲ” ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸುತ್ತಿಲ್ಲ ಎಂದು ಏಳು ಮಹಿಳಾ ಕುಸ್ತಿಪಟುಗಳು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಂಗಳವಾರ ದೆಹಲಿ ಸರ್ಕಾರ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದ್ದು, ಇವುಗಳು ಗಂಭೀರ ಆರೋಪಗಳಾಗಿದ್ದು, ಅದನ್ನು ಪರಿಗಣಿಸುವ ಅಗತ್ಯವಿದೆ ಎಂದು ಹೇಳಿದೆ.

Leave a Reply

Your email address will not be published. Required fields are marked *

error: Content is protected !!