ಮುಸ್ಲಿಮರ 2ಬಿ ಮೀಸಲಾತಿ ರದ್ದು: ಮೇ 9 ರವರೆಗೆ ಕರ್ನಾಟಕ ಸರ್ಕಾರದ ಆದೇಶ ಅನುಷ್ಠಾನ ಬೇಡ- ಸುಪ್ರೀಂ ಕೋರ್ಟ್

ನವದೆಹಲಿ: ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿ ರದ್ದುಗೊಳಿಸುವ ಕರ್ನಾಟಕ ಸರಕಾರದ ಆದೇಶ ಮೇ 9 ರವರೆಗೆ ಅನುಷ್ಠಾನವಾಗಬಾರದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶಿಸಿದೆ. ಪ್ರತಿಕ್ರಿಯೆಗೆ ರಾಜ್ಯ ಸರ್ಕಾರ ಸಮಯಾವಕಾಶ ಕೇಳಿದ ನಂತರ ಉನ್ನತ ನ್ಯಾಯಾಲಯ ಈ ಆದೇಶ ನೀಡಿದೆ.

ಮುಂದಿನ ವಿಚಾರಣೆ ಮೇ 9 ರವರೆಗೂ ಮುಸ್ಲಿಮರಿಗೆ ಈ ಹಿಂದೆ ಇದ್ದ ಶೇ. 4 ರಷ್ಟು ಕೋಟಾ ಮುಂದುವರೆಯುತ್ತದೆ ಎಂದು ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.

ಮುಂದಿನ ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಪ್ರತಿಕ್ರಿಯೆ ಸಲ್ಲಿಸಲಾಗುವುದು ಎಂದು ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಇಂದೇ ಸರ್ಕಾರದ ಪ್ರತಿಕ್ರಿಯೆ ಸಲ್ಲಿಸುತ್ತಿದ್ದೆ. ಆದರೆ, ಸಾಲಿಸಿಟರ್ ಜನರಲ್ ಆಗಿ ಸಲಿಂಗ ವಿವಾಹಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಆಲಿಸುತ್ತಿರುವ ಸಾಂವಿಧಾನಿಕ ಪೀಠದ ಮುಂದೆ ವಾದಿಸುತ್ತಿರುವ ಕಾರಣ ವೈಯಕ್ತಿಕವಾಗಿ ತೊಂದರೆಯಲ್ಲಿದ್ದು, ಬೇರೆ ದಿನದಂದು ಈ ವಿಷಯದ ವಿಚಾರಣೆ ನಡಸಬೇಕು ಎಂದು ಮನವಿ ಮಾಡಿದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, ಮೆಹ್ತಾ  ಮನವಿಯನ್ನು ವಿರೋಧಿಸಿದರು ಮತ್ತು ವಿಚಾರಣೆಯನ್ನು ಈಗಾಗಲೇ ನಾಲ್ಕು ಬಾರಿ ಮುಂದೂಡಲಾಗಿದೆ. ನ್ಯಾಯಾಲಯವು ನೀಡಿರುವ ಮಧ್ಯಂತರ ಆದೇಶವು ಈಗಾಗಲೇ ಅರ್ಜಿದಾರರ ಪರವಾಗಿದೆ ಎಂದು ತಿಳಿಸಿದರು. 

ಮುಸಲ್ಮಾನರ ಕೋಟಾವನ್ನು ಕಾರ್ಯಗತಗೊಳಿಸಲಾಗುವುದಿಲ್ಲ ಮತ್ತು ಮುಂದಿನ ವಿಚಾರಣೆವರೆಗೂ ಮುಸ್ಲಿಮರ 2ಬಿ ಮೀಸಲಾತಿ ರದ್ದುಪಡಿಸುವ ಆದೇಶವನ್ನು ಅನುಷ್ಠಾನಗೊಳಿಸುವುದಿಲ್ಲ ಎಂಬ ಮೆಹ್ತಾ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ದುಶ್ಯಂತ್ ದವೆ ನ್ಯಾಯಾಲಯವನ್ನು ಕೇಳಿದರು.

ದಾವೆ ಅವರ ಮನವಿಯನ್ನು ಪರಿಗಣಿಸಿದ ನ್ಯಾಯಾಲಯ, ಮೆಹ್ತಾ ಅವರ ಹೇಳಿಕೆ ದಾಖಲಿಸಿಕೊಂಡು, ಮುಂದಿನ ವಿಚಾರಣೆಯನ್ನು ಮೇ 9ಕ್ಕೆ ಮುಂದೂಡಿತು. ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿ ರದ್ದತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದಿಗೆ ಮುಂದೂಡಿತ್ತು. ಇದೀಗ ಮತ್ತೇ ಮೇ 9ಕ್ಕೆ ವಿಚಾರಣೆಯನ್ನು ನಿಗದಿಪಡಿಸಿದೆ. 

Leave a Reply

Your email address will not be published. Required fields are marked *

error: Content is protected !!