ರಾಜಕಾರಣದಲ್ಲಿ ನಾಯಕನ ಆರಾಧನೆ ಅಪಾಯಕಾರಿ ಎಂದು ಅಂಬೇಡ್ಕರ್ ಮೊದಲೇ ಎಚ್ಚರಿಸಿದ್ದರು- ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ‘ದೇಶದಲ್ಲಿ ಬಲವಂತವಾಗಿ ಜನರನ್ನು ಬಾಯಿ ಮುಚ್ಚಿಸುವ ಸಂಸ್ಕೃತಿ ಹಾಗೂ ರಾಷ್ಟ್ರ ವಿರೋಧಿ ಪಟ್ಟ ಕಟ್ಟುವ ಮನಃಸ್ಥಿತಿ ಮೇಲುಗೈ ಸಾಧಿಸುತ್ತಿರುವುದು ಭವಿಷ್ಯದಲ್ಲಿ ಭಾರತೀಯ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ನಾಶಕ್ಕೆ ಕಾರಣವಾಗಲಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಹಿನ್ನೆಲೆಯಲ್ಲಿ ಸಂದೇಶ ನೀಡಿರುವ ಅವರು, ‘ಸಂಸತ್ ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ನಡುವಿನ ಚರ್ಚೆಗೆ ವೇದಿಕೆಯಾಗಬೇಕು. ಆದರೆ, ಅದನ್ನು ಆಡಳಿತ ಪಕ್ಷವು ಹೋರಾಟದ ಅಖಾಡವಾಗಿ ಪರಿವರ್ತಿಸಿದೆ’ ಎಂದು ವಿಷಾದಿಸಿದ್ದಾರೆ.
ಪ್ರಜಾಸತ್ತಾತ್ಮಕ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಹಾಗೂ ನ್ಯಾಯದ ಅನುಷ್ಠಾನದಲ್ಲಿ ಅಂಬೇಡ್ಕರ್ ‘ಚಾಂಪಿಯನ್’ ಆಗಿದ್ದಾರೆ. ದೇಶವನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಪಡಿಸುವಲ್ಲಿ ಅವರಿಗಿದ್ದ ಬದ್ಧತೆ ನಮಗೆ ಅನುಕರಣೀಯ. ಜಾತಿ ಪದ್ಧತಿ, ಲಿಂಗ ಅಸಮಾನತೆಯ ನಿರ್ಮೂಲನೆಯಲ್ಲಿ ಅವರ ಶ್ರಮ ಎಲ್ಲರಿಗೂ ಮಾದರಿ ಎಂದು ಸ್ಮರಿಸಿದ್ದಾರೆ.
‘ರಾಜಕಾರಣದಲ್ಲಿ ಭಕ್ತಿ ಅಥವಾ ನಾಯಕನ ಆರಾಧನೆಯು ಅಪಾಯಕಾರಿ ಎಂದು ಅಂಬೇಡ್ಕರ್ ಈ ಮೊದಲೇ ಎಚ್ಚರಿಸಿದ್ದಾರೆ. ಪ್ರಸಕ್ತ ದೇಶದ ರಾಜಕೀಯದಲ್ಲಿ ಈ ಮನಃಸ್ಥಿತಿಯೇ ತುಂಬಿದೆ. ಧಾರ್ಮಿಕ ತಳಹದಿಯಲ್ಲಿ ಭಕ್ತಿಯು ಆತ್ಮದ ಮುಕ್ತಿಗೆ ದಾರಿಯಾಗಬೇಕು. ಆದರೆ, ‘ಭಕ್ತಿ’ ಪ್ರೇರಿತ ರಾಜಕೀಯ ಸಲ್ಲದು. ಒಂದು ವೇಳೆ ಇದು ರಾಜಕಾರಣಕ್ಕೆ ಪ್ರವೇಶಿಸಿದರೆ ಆ ಕ್ಷೇತ್ರ ಅವನತಿ ಹೊಂದಿ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ’ ಎಂದು ಅಂಬೇಡ್ಕರ್ ಹೇಳಿಕೆಯನ್ನು ಉಲ್ಲೇಖಿಸಿರುವ ಖರ್ಗೆ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಪ್ರಸ್ತಾಪಿಸದೆ ಟೀಕಿಸಿದ್ದಾರೆ.
ಪ್ರಸ್ತುತ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಬೇಕೇ ಅಥವಾ ಸರ್ವಾಧಿಕಾರಿ ಧೋರಣೆಯನ್ನು ಬೆಂಬಲಿಸಬೇಕೇ ಎಂಬ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಬಂದಿದೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಂಬೇಡ್ಕರ್ ಅವರಿಗೆ ಗೌರವ ಸೂಚಿಸಿದ್ದು, ‘ಅಂಬೇಡ್ಕರ್ ಅವರ ಪ್ರಜಾಸತ್ತಾತ್ಮಕ ಆಶಯಗಳೇ ನಮಗೆ ದಾರಿದೀಪವಾಗಿವೆ, ಅವು ನಮ್ಮ ಶಕ್ತಿಯೂ ಆಗಿವೆ’ ಎಂದಿದ್ದಾರೆ.