ತಮ್ಮದೇ ಸರ್ಕಾರದ ವಿರುದ್ಧ ಸಚಿನ್ ಪೈಲಟ್ ಉಪವಾಸ-ಪಕ್ಷ ವಿರೋಧಿ ನಡೆ ಎಂದ ಕಾಂಗ್ರೆಸ್

ನವದೆಹಲಿ: ಇಂದು ತಮ್ಮದೇ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿರುವ ಸಚಿನ್‌ ಪೈಲಟ್‌ ಅವರ ನಡೆ ಪಕ್ಷ ವಿರೋಧಿಯಾದದ್ದು ಎಂದು ರಾಜಸ್ಥಾನ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುಖಜಿಂದರ್‌ ಸಿಂಗ್‌ ರಾಂಧವಾ ಹೇಳಿದ್ದಾರೆ.

ಬಿಜೆಪಿ ನಾಯಕಿ ಹಾಗೂ ಹಿಂದಿನ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಮಾಡಲಾಗಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದರ ಪ್ರತಿಭಟನಾರ್ಥವಾಗಿ ಇಂದು ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಚಿನ್‌ ಪೈಲಟ್‌ ಭಾನುವಾರ ಘೋಷಿಸಿದ್ದರು.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ರಾಂಧವಾ, ‘ಸಚಿನ್‌ ಪೈಲಟ್‌ ಅವರು ಮಂಗಳವಾರ ನಡೆಸಲು ಉದ್ದೇಶಿಸಿರುವ ಉಪವಾಸ ಸತ್ಯಾಗ್ರಹವು ಪಕ್ಷದ ಹಿತಾಸಕ್ತಿಗೆ ವಿರುದ್ಧವಾದದ್ದು ಹಾಗೂ ಪಕ್ಷ ವಿರೋಧಿ ಚಟುವಟಿಕೆಯಾಗಿದೆ. ತಮ್ಮದೇ ಸರ್ಕಾರದ ಜೊತೆಗೆ ಏನಾದರೂ ಸಮಸ್ಯೆಗಳಿದ್ದರೆ, ಮಾಧ್ಯಮಗಳು ಅಥವಾ ಸಾರ್ವಜನಿಕವಾಗಿ ಮಾತನಾಡುವ ಬದಲು ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು’ ಎಂದು ತಿಳಿಸಿದ್ದಾರೆ.

‘ನಾನು ಕಳೆದ 5 ತಿಂಗಳುಗಳಿಂದ ಎಐಸಿಸಿ ಉಸ್ತುವಾರಿ ಯಾಗಿದ್ದೇನೆ. ಪೈಲಟ್‌ ಅವರು ಎಂದೂ ಈ ವಿಚಾರದ (ನಿಷ್ಕ್ರಿಯತೆ) ಬಗ್ಗೆ ನನ್ನೊಂದಿಗೆ ಚರ್ಚಿಸಿಲ್ಲ. ನಾನು ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಈಗಲೂ ಶಾಂತಿಯುತ ಮಾತುಕತೆಗೆ ಮನವಿ ಮಾಡುತ್ತಿದ್ದೇನೆ. ಅವರು (ಸಚಿನ್ ಪೈಲಟ್‌) ಕಾಂಗ್ರೆಸ್‌ಗೆ ವಿವಾದಾತೀತ ಆಸ್ತಿ’ ಎಂದೂ ಹೇಳಿದ್ದಾರೆ.

ಅಧಿಕಾರಕ್ಕೆ ಬಂದಾಗಿನಿಂದಲೂ ಹಗ್ಗಜಗ್ಗಾಟ…
ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರವು 2018ರಲ್ಲಿ ಅಸ್ತಿತ್ವಕ್ಕೆ ಬಂದ ದಿನದಿಂದಲೇ ಮುಖ್ಯಮಂತ್ರಿ ಪದವಿಗೆ ಸಂಬಂಧಿಸಿ ಗೆಹಲೋತ್‌ ಹಾಗೂ ಪೈಲಟ್‌ ನಡುವೆ ಹಗ್ಗಜಗ್ಗಾಟ ನಡೆದಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾಗಬೇಕು ಎಂದು ಆಗ್ರಹಿಸಿ 2020ರ ಜುಲೈನಲ್ಲಿ ಪೈಲಟ್‌ ಹಾಗೂ ಅವರ ಬೆಂಬಲಿಗ 18 ಶಾಸಕರು ಬಹಿರಂಗವಾಗಿಯೇ ಬಂಡಾಯವೆದ್ದಿದ್ದರು. ಇದು ರಾಜ್ಯದಲ್ಲಿ ಒಂದು ತಿಂಗಳು ಕಾಲ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿತ್ತು.

ಪೈಲಟ್‌ ವಿರುದ್ಧ ವಾಗ್ದಾಳಿ ನಡೆಸಿದ್ದ ಗೆಹಲೋತ್‌, ‘ನನ್ನ ಸರ್ಕಾರವನ್ನು ಉರುಳಿಸಲು ಬಿಜೆಪಿ ಜೊತೆ ಸೇರಿ ಪೈಲಟ್‌ ಸಂಚು ರೂಪಿಸಿದ್ದಾರೆ’ ಎಂದು ಆಗ ಆರೋಪಿಸಿದ್ದರು. ನಂತರ, ಪೈಲಟ್‌ ಎತ್ತಿರುವ ವಿಷಯಗಳ ಕುರಿತು ಪರಿಶೀಲನೆ ನಡಸುವುದಾಗಿ ಪಕ್ಷದ ಹೈಕಮಾಂಡ್‌ ಭರವಸೆ ನೀಡಿದ ನಂತರ, ಬಂಡಾಯ ಶಮನವಾಗಿತ್ತು.

‘ಭಾರತ್‌ ಜೋಡೊ ಯಾತ್ರೆ’ ರಾಜಸ್ಥಾನ ಪ್ರವೇಶಿಸುವ ಕೆಲ ದಿನಗಳ ಮುಂಚೆಯೂ ಪೈಲಟ್‌ ವಿರುದ್ಧ ವಾಗ್ದಾಳಿ ನಡೆಸಿದ್ದ ಗೆಹಲೋತ್‌, ಅವರನ್ನು ನಂಬಿಕೆ ದ್ರೋಹಿ ಎಂದು ಜರಿದಿದ್ದರು.

ಅವರು (ಗೆಹಲೋತ್‌) ಬಳಸಿದಂತಹ ಭಾಷೆ ಬಳಸುವುದು ನನ್ನ ಸಂಸ್ಕಾರವಲ್ಲ’ ಎಂದು ಪೈಲಟ್‌ ತಿರುಗೇಟು ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!