ಪತ್ರಕರ್ತರ ಸೋಗಿನಲ್ಲಿ ಬಂದ ಮೂವರಿಂದ ಗ್ಯಾಂಗ್‌ಸ್ಟರ್‌ ಅತೀಕ್‌, ಅಶ್ರಫ್‌ ಗುಂಡಿಕ್ಕಿ ಹತ್ಯೆ

ಪ್ರಯಾಗ್‌ರಾಜ್‌: ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಕಳೆದ ರಾತ್ರಿ ಗ್ಯಾಂಗ್‌ಸ್ಟರ್‌, ಮಾಜಿ ಸಂಸದ ಅತೀಕ್‌ ಅಹ್ಮದ್‌ ಹಾಗೂ ಆತನ ಸಹೋದರ ಅಶ್ರಫ್‌ ಅಹ್ಮದ್‌ ಪೊಲೀಸರ ಬಿಗಿ ಭದ್ರತೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ತೆರಳುತ್ತಿದ್ದಾಗಲೇ ದುಷ್ಕರ್ಮಿಗಳ ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಈ ಗುಂಡಿನ ದಾಳಿಯ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕೃತ್ಯ ಎಸಗಿದ ಮೂವರನ್ನು ಪೊಲೀಸರು ಬಂದಿಸಿದ್ದಾರೆ.

ಪತ್ರಕರ್ತರ ಸೋಗಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಪೊಲೀಸರು ಮತ್ತು ಮಾಧ್ಯಮದವರ ಎದುರೇ ಅತೀಕ್‌ ಮತ್ತು ಅಶ್ರಫ್‌ ಮೇಲೆ ಏಕಾಏಕಿ ದಾಳಿ ನಡೆಸಿದರು. ತೀರಾ ಹತ್ತಿರದಲ್ಲಿಯೇ ದಾಳಿ ನಡೆದಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬಿಎಸ್‌ಪಿಯ ಮಾಜಿ ಶಾಸಕ ರಾಜು ಪಾಲ್‌ ಅವರ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್‌ ಪಾಲ್‌ ಕೊಲೆ ಪ್ರಕರಣದಲ್ಲಿ ಈ ಇಬ್ಬರು ಆರೋಪಿಗಳಾಗಿದ್ದರು.

ಉತ್ತರ ಪ್ರದೇಶದ ಪೊಲೀಸರು ಝಾನ್ಸಿಯಲ್ಲಿ ಗುರುವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಉಮೇಶ್‌ ಪಾಲ್ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಅತೀಕ್‌ ಅಹ್ಮದ್‌ನ ಪುತ್ರ ಅಸಾದ್‌ ಹಾಗೂ ಆತನ ಸಹಚರ ಗುಲಾಮ್‌  ಹತ್ಯೆಯಾಗಿದ್ದರು.

ಪಾತಕಿ ಅತೀಕ್‌ ಮೇಲೆ ಉಮೇಶ್‌ ಪಾಲ್‌ ಕೊಲೆ ಸೇರಿದಂತೆ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಘಟನೆ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಟ್ವೀಟ್‌ ಮಾಡಿದ್ದು, ‘ಉತ್ತರ ಪ್ರದೇಶದಲ್ಲಿ ಅಪರಾಧ ಚಟುವಟಿಕೆಗಳು ಉತ್ತುಂಗಕ್ಕೇರಿವೆ. ಪೊಲೀಸರ ಭದ್ರತೆಯಲ್ಲಿ ಇರುವವವರೇ ಗುಂಡೇಟಿಗೆ ಬಲಿಯಾದರೆ ಜನಸಾಮಾನ್ಯರ ಪಾಡೇನು. ಈ ಘಟನೆಯಿಂದ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೆಲವರು ಉದ್ದೇಶಪೂರ್ವಕ ವಾಗಿಯೇ ಸಮಾಜದ ನೆಮ್ಮದಿ ಹದಗೆಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!