ಪುಲ್ವಾಮದಲ್ಲಿ ಮತ್ತೊಮ್ಮೆ ದಾಳಿಗೆ ಉಗ್ರರ ಸಂಚು: ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಮತ್ತೊಮ್ಮೆ ಭಾರೀ ದಾಳಿ ನಡೆಸಲು ಉಗ್ರರು ನಡೆಸಿದ್ದ ಸಂಚನ್ನು ಭಾರತೀಯ ಯೋಧರು ವಿಫಲಗೊಳ್ಳುವಂತೆ ಮಾಡಿದ್ದಾರೆ. ಬರೋಬ್ಬರಿ 20 ಕೆಜಿಗೂ ಹೆಚ್ಚು ತೂಕದ ಸುಧಾರಿತ ಸ್ಫೋಟಕ ಸಾಧನ ಹೊತ್ತು ಸಾಗುತ್ತಿದ್ದ ವಾಹನವನ್ನು ಭದ್ರತಾ ಪಡೆಗಳು ತಡೆದಿದ್ದು, ಈ ಮೂಲಕ ಭಾರೀ ಅನಾಹುತವೊಂದು ತಪ್ಪುವಂತೆ ಮಾಡಿದ್ದಾರೆ. 

ನಕಲಿ ನೋಂದಣಿ ಸಂಖ್ಯೆ ಹೊಂದಿದ್ದ ಕಾರು ಇಂದು ಬೆಳಿಗ್ಗೆ ಚೆಕ್ ಪಾಯಿಂಟ್ ನಲ್ಲಿ ಚಲಿಸುತ್ತಿತ್ತು. ಈ ವೇಳೆ ಭದ್ರತಾ ಪಡೆಗಳು ನಿಲ್ಲಿಸುವಂತೆ ಸೂಚಿಸಿದರು, ಚಾಲಕ ಮತ್ತಷ್ಟು ವೇಗವಾಗಿ ಚಲಿಸಿಕೊಂಡು ಹೋಗಲು ಆರಂಭಿಸಿದ್ದ. 

ಈ ವೇಳೆ ಭದ್ರತಾ ಪಡೆಗಳು ಗುಂಡು ಹಾರಿಸಿದ್ದಾರೆ. ಆದರೂ ವಾಹನ ಚಲನೆ ಮುಂದುವರೆದಿದ್ದು, ಬಳಿಕ ಕಾರು ಚಾಲಕ ವಾಹನ ಬಿಟ್ಟು ಪರಾರಿಯಾಗುವಲ್ಲಿ ಸಫಲನಾಗಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಸಂಭಾವ್ಯ ದಾಳಿ ಕುರಿತಂತೆ ಗುಪ್ತಚರ ದಳ ಮಾಹಿತಿ ನೀಡಿದ್ದವು. ಐಇಡಿ ತುಂಬಿದ್ದ ವಾಹನ ಬರುವಿಕೆಗಾಗಿ ನಾವೂ ಕೂಡ ಕಾಯುತ್ತಿದ್ದೆವು. ಇದೀಗ ಐಇಡಿಯನ್ನು ಜೋಪಾನವಾಗಿ ಕಾರಿನಿಂದ ಹೊರಗೆ ತೆಗೆದಿದ್ದು, ಬಾಂಬ್ ನಿಷ್ಕ್ರಿಯ ದಳ ಅದನ್ನು ನಿಷ್ಕ್ರಿಯಗೊಳಿಸಿದೆ.

ಬಾಂಬ್ ನಿಷ್ಕ್ರಿಯಗೊಳಿಸುವ ವೇಳೆ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಗೊಳಿಸಲಾಗಿದ್ದು, ಈ ವೇಳೆ ಯಾವುದೇ ರೀತಿಯ ಸಾವು-ನೋವುಗಳು ಸಂಭವಿಸಿದಂತೆ ಹಾಗೂ ಯಾವುದೇ ಮನೆಗಳಿಗೂ ಹಾನಿಯಾಗದಂತೆ ನಿಯಂತ್ರಿತ ಸ್ಫೋಟಕದಿಂದ ಬಾಂಬ್ ನಿಷ್ಕ್ರಿಯಗೊಳಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಅರೆ ಸೇನಾಪಡೆಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದವು ಎಂದು ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ಅವರು ತಿಳಿಸಿದ್ದಾರೆ. 

2019ರ ಫೆಬ್ರವರಿ ತಿಂಗಳಿನಲ್ಲಿ ಪುಲ್ವಾಮ ಜಿಲ್ಲೆಯಲ್ಲಿ ಆತ್ಮಾಹುತಿ ಐಇಡಿ ದಾಳಿ ನಡೆಸಲಾಗಿತ್ತಿ. ಈ ವೇಳೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 41 ಯೋಧರು ಹುತಾತ್ಮರಾಗಿದ್ದರು. 

Leave a Reply

Your email address will not be published. Required fields are marked *

error: Content is protected !!