ಕೇಂದ್ರ ಸರ್ಕಾರವು ಜನರ ನಿರೀಕ್ಷೆಯನ್ನು ಈಡೇರಿಸಿದೆ: ಸಮೀಕ್ಷೆಯಲ್ಲಿ ಶೇ 62ರಷ್ಟು ಅಭಿಮತ

ನವದೆಹಲಿ: ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರವು ತಮ್ಮ ನಿರೀಕ್ಷೆಯನ್ನು ಈಡೇರಿಸಿದೆ ಅಥವಾ ನಿರೀಕ್ಷೆಯನ್ನು ಮೀರಿ ಕೆಲಸ ಮಾಡಿದೆ ಎಂದು ಶೇ 62ರಷ್ಟು ಜನರು ಹೇಳಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿಕೊಂಡಿದೆ. ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರಕ್ಕೆ ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಸಮೀಕ್ಷೆ ನಡೆಸಲಾಗಿದೆ. 


ಲೋಕಲ್‌ ಸರ್ಕಲ್ಸ್‌ ಜಾಲತಾಣವು ಸಮೀಕ್ಷೆ ನಡೆಸಿದೆ. 

ಏಪ್ರಿಲ್‌ 30ರಿಂದ ಮೇ 14ರ ಅವಧಿಯಲ್ಲಿ ಈ ಸಮೀಕ್ಷೆ ನಡೆದಿದೆ. ಕೇಂದ್ರ ಸರ್ಕಾರವು ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿಲ್ಲ ಎಂಬ ಭಾವನೆ ಸಮೀಕ್ಷೆಯಲ್ಲಿ ಭಾಗಿಯಾದ ಶೇ 56 ಮಂದಿಯಲ್ಲಿ ಇದೆ.

‘ಸರ್ಕಾರವು ನಮ್ಮ ನಿರೀಕ್ಷೆಯನ್ನು ಮೀರಿ ಕೆಲಸ ಮಾಡಿದೆ ಎಂದು ಶೇ 26ರಷ್ಟು ಮಂದಿ ಹೇಳಿದ್ದಾರೆ. ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದೆ ಎಂದು ಶೇ 36ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಭಯೋತ್ಪಾದನೆಯ ವಿರುದ್ಧ ಸರ್ಕಾರದ ಗಟ್ಟಿ ನಿಲುವು, ವಿವಿಧ ದೇಶಗಳ ಜತೆಗೆ ಸಂಬಂಧ ವೃದ್ಧಿಯ ಯತ್ನ, ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಏರಿಕೆ, ಸಂಸತ್ತಿನಲ್ಲಿ ಬಾಕಿ ಇದ್ದ ಮಸೂದೆಗಳ ಅಂಗೀಕಾರ, ಕೋವಿಡ್‌ ಪಿಡುಗು ನಿರ್ವಹಣೆಗೆ ಕೈಗೊಂಡ ಕ್ರಮಗಳು ಜನರ ಈ ನಿಲುವಿಗೆ ಕಾರಣ ಆಗಿರಬಹುದು’ ಎಂದು ‘ಲೋಕಲ್‌ ಸರ್ಕಲ್ಸ್’‌ ಹೇಳಿಕೊಂಡಿದೆ. 

ಕೋವಿಡ್‌ ಪಿಡುಗನ್ನು ಸರ್ಕಾರವು ‘ಅತ್ಯಂತ ಪರಿಣಾಮಕಾರಿ’ಯಾಗಿ ನಿಭಾಯಿಸಿದೆ ಎಂದು ಶೇ 59ರಷ್ಟು ಮಂದಿ ಹೇಳಿದರೆ, ಸರ್ಕಾರದ ಕ್ರಮಗಳು ‘ಪರಿಣಾಮಕಾರಿ ಅಲ್ಲ’ ಎಂದು ಶೇ 7ರಷ್ಟು ಮಂದಿ ಹೇಳಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅಗತ್ಯ ವಸ್ತುಗಳ ಬೆಲೆ, ಜೀವನ ನಿರ್ವಹಣೆ ವೆಚ್ಚ ಇಳಿಕೆಯಾಗಿದೆ ಎಂದು ಶೇ 36ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. 

ತೆರಿಗೆ ಅಧಿಕಾರಿಗಳ ಕಿರುಕುಳ ಕಡಿಮೆಯಾಗಿದೆ ಎಂದು ಶೇ 52ರಷ್ಟು ಮಂದಿ ಉತ್ತರಿಸಿದ್ದಾರೆ. ವ್ಯಾಪಾರ ಮಾಡುವುದು ಸುಲಭವಾಗಿದೆ ಎಂದವರು ಶೇ 43ರಷ್ಟು ಮಂದಿ. ‘ಇಲ್ಲ’ ಎಂದವರು ಶೇ 33ರಷ್ಟು ಮಂದಿ ಎಂದು ಸಮೀಕ್ಷೆ ಹೇಳಿಕೊಂಡಿದೆ.

ಸಮೀಕ್ಷೆಯಲ್ಲಿ ಭಾಗಿಯಾದವರ ಸಂಖ್ಯೆ 65,000. ಒಟ್ಟು 280 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.

Leave a Reply

Your email address will not be published. Required fields are marked *

error: Content is protected !!