ಮಾ.17 ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ

ಚಿಕ್ಕಬಳ್ಳಾಪುರ: ಮಾ.17ಕ್ಕೆ ಮತ್ತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಚಿಕ್ಕಬಳ್ಳಾಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಉದ್ಘಾಟನೆ ಮಾಡಲಿದ್ದಾರೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಅವರು ಮಾಹಿತಿ ನೀಡಿದ್ದಾರೆ.

ಮಂಚೇನಹಳ್ಳಿ ತಾಲೂಕಿನ ಹಳೇಹಳ್ಳಿಯಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರದ ಆರೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ವೈದ್ಯಕೀಯ ಕಾಲೇಜನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾ.17ರಂದು ಉದ್ಘಾಟಿಸಲಿದ್ದಾರೆ. ಈ ವೈದ್ಯಕೀಯ ಕಾಲೇಜು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವರದಾನವಾಗಲಿದೆ ಎಂದು ಹೇಳಿದರು.

ವೈದ್ಯಕೀಯ ಕಾಲೇಜು ಉದ್ಘಾಟನೆ ಜೊತೆಗೆ, 22 ಸಾವಿರ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ ಮಾಡಲಾಗುವುದು. ಮೋದಿ ಅವರ ಹಸ್ತದಿಂದಲೇ ನಿವೇಶನಗಳ ಹಕ್ಕುಪತ್ರ ವಿತರಣೆ ಮಾಡಲಾಗುವುದು. ಈಗಾಗಲೇ ಹಳೇಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 3 ಎಕರೆ ಭೂಮಿ ಗುರುತಿಸಲಾಗಿದ್ದು, ಇದರಲ್ಲಿ 107 ನಿವೇಶನ ನಿರ್ಮಾಣವಾಗಲಿದೆ. ಅದರ ಜೊತೆಗೆ ಮತ್ತೊಂದು ಪ್ರದೇಶದಲ್ಲಿ 3 ಎಕರೆ ಜಾಗ ಗುರುತಿಸಿದ್ದು, ಇದರಲ್ಲಿ 120 ನಿವೇಶನ ಆಗಲಿದೆ. ಜೊತೆಗೆ ಉಪ್ಪರಹಳ್ಳಿಯಲ್ಲಿ 9.20 ಎಕರೆ ಭೂಮಿ ಸೇರಿ ಒಟ್ಟು 707 ನಿವೇಶನಗಳನ್ನು ಹಳೇಹಳ್ಳಿ ಗ್ರಾ.ಪಂ. ಒಂದರಲ್ಲಿಯೇ ವಿತರಿಸಲಾಗುವುದು. ಈ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು ನಿವೇಶನ ರಹಿತರ ಸಂಖ್ಯೆ 194 ಮಾತ್ರ ಇದ್ದು, ಇನ್ನೂ ನಿವೇಶನಗಳು ಉಳಿಯುವುದರಿಂದ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ನಿವೇಶನ ರಹಿತ ಬಡವರನ್ನು ಗುರುತಿಸಿ, ಅವರಿಂದ ಅರ್ಜಿ ಪಡೆದು, ನಿವೇಶನ ನೀಡಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಬಸವ ವಸತಿ ಯೋಜನೆಯಡಿ 125 ಮನೆಗಳನ್ನು ಕೂಡ ನೀಡಲಾಗುವುದು ಮತ್ತು ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ರಾಜ್ಯ ಕಾರ್ಯಕ್ರಮದಡಿ 1.5 ಕೋಟಿ ಕಾರ್ಡ್‌ಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ಹೊಸದಾಗಿ ರಚನೆಯಾಗಿರುವ ಮಂಚೇನಹಳ್ಳಿ ತಾಲೂಕಿನಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು, ಮಾ.3 ರಂದು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!