ಕಡಬ: ಕಾಡಾನೆ ದಾಳಿಗೆ ಹಾಲು ಒಯ್ಯುತ್ತಿದ್ದ ಮಹಿಳೆ ಸಹಿತ ಇಬ್ಬರ ಬಲಿ

ಕಡಬ: ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಬಲಿಯಾಗಿರುವ ಘಟನೆ ಕುಟುಪಾಡಿ ಗ್ರಾಮದ ಮೀನಾಡಿ ಸಮೀಪ ಇಂದು ಮುಂಜಾನೆ ನಡೆದಿದೆ.

ಪೇರಡ್ಕ ಹಾಲು ಸೊಸೈಟಿ ಸಿಬ್ಬಂದಿಯಾಗಿರುವ ರಂಜಿತಾ ಎಂಬವರು ಸೊಸೈಟಿಗೆ ಮನೆಯಿಂದ ಹೋಗುತ್ತಿದ್ದ ವೇಳೆ ಮೀನಾಡಿ ಎಂಬಲ್ಲಿ ಆನೆ ದಾಳಿ ನಡೆಸಿದೆ. ಇದೇ ವೇಳೆ ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿ ರಮೇಶ್ ರೈ ಎಂಬವರ ಮೇಲೆ ಆನೆ ಅಟ್ಟಹಾಸ ಮೆರೆದಿದೆ.ರಮೇಶ್ ರೈ ಸ್ಥಳದಲ್ಲಿ ಮೃತಪಟ್ಟರೆ ರಂಜಿತ ಅವರು ನೆಲ್ಯಾಡಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಆನೆಯನ್ನು ಕಂಡು ರಂಜಿತಾ ಅವರು ಬೊಬ್ಬೆ ಹೊಡೆದಿದ್ದರು. ಅವರನ್ನು ರಕ್ಷಿಸಲು ಧಾವಿಸಿದ ರಮೇಶ್ ಅವರ ಮೇಲೂ ಆನೆ ದಾಳಿ ನಡೆಸಿತ್ತು. ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ರಮೇಶ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಂಜಿತಾ ಅವರು ಆಸ್ಪತ್ರೆಗೆ ಸಾಗಿಸುವ ವೇಳೆ ಕೊನೆಯುಸಿರೆಳೆದಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ‌.

ಈ ಪರಿಸರದಲ್ಲಿ ಅನೇಕ ತಿಂಗಳುಗಳಿಂದ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಮನುಷ್ಯರ ಮೇಲೆ ದಾಳಿ ನಡೆಸಿದ್ದು ಇದೇ ಮೊದಲು ಎಂದು ಸ್ಥಳೀಯರು ತಿಳಿಸಿದ್ದಾರೆ. 

‘ಆನೆ ದಾಳಿಯಿಂದ ಇಬ್ಬರು ಮೃತಪಟ್ಟ ಬಗ್ಗೆ ಮಾಹಿತಿ ಬಂದಿದೆ. ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ನಾನು ಕೂಡಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದೇನೆ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ತಿಳಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!