ಕಾರ್ಕಳ ವಿಧಾನ‌ ಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯ ಘೋಷಣೆ

ಹೆಬ್ರಿ: ನಿಷ್ಠಾವಂತರಾದ ಸಮಾಜ ಸೇವಕ ಕುಚ್ಚೂರು ಶ್ರೀಕಾಂತ್‌ ಪೂಜಾರಿ ಅವರನ್ನು ಕಾರ್ಕಳ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದೇವೆ, ನಿರಂರತವಾಗಿ ಜನಸೇವೆ ಮಾಡುವ ಶ್ರೀಕಾಂತ್‌ ಅವರನ್ನು ಬೆಂಬಲಿಸಿ ಕೈ ಬಲಪಡಿಸಿ ಎಂದು ಎಂದು ಜೆಡಿಎಸ್‌ ಪಕ್ಷದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ವಿ ಶೆಟ್ಟಿ ಮಾಡಿದರು.

ಅವರು ಹೆಬ್ರಿಯ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಭಾನುವಾರ ಹೆಬ್ರಿ ಶ್ರೀಕಾಂತ್‌ ಕುಚ್ಚೂರು ನೇತ್ರತ್ವದಲ್ಲಿ ನಡೆದ ಕಾರ್ಕಳ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಕಳದಲ್ಲಿ ಎಲ್ಲಾ ಪ್ರಶ್ನೆಗಳಿಗೂ ಶ್ರೀಕಾಂತ್‌ ಪೂಜಾರಿ ಉತ್ತರ ನೀಡುತ್ತಾರೆ. ಹೆಬ್ರಿಯಲ್ಲಿ ಯಶಸ್ವಿಯಾಗಿ ಜೆಡಿಎಸ್‌ ಸಮಾವೇಶ ನಡೆದಿದೆ, ತಂದ ಜನ ಅಲ್ಲ ಬಂದ ಜನ ಎಂದು ಹೆಬ್ರಿಯ ಬೃಹತ್‌ ಸಮಾವೇಶಕ್ಕೆ ಯೋಗೀಶ್ ವಿ ಶೆಟ್ಟಿ ಮೆಚ್ಚಿಗೆ ವ್ಯಕ್ತಪಡಿಸಿದರು.

ಬಡವರು ಸೇರಿ ಜನ ಕಲ್ಯಾಣವಾಗಬೇಕಾದರೆ ಜೆಡಿಎಸ್‌ ಪಕ್ಷವನ್ನು ಬೆಂಬಲಿಸಿ, ಪಂಚರತ್ನ ಯೋಜನೆಯ ಮೂಲಕ ಮನೆಮನೆಗೆ ಕುಮಾರಣ್ಣ ಕನಸಿನ ಯೋಜನೆಯನ್ನು ತಲುಪಿಸಲು ಸಿದ್ಧರಾಗಿದ್ದರೆ, ಹಿಂದೆ ಲಾಟರಿ, ಸರಾಯಿ ನಿಷೇಧ ಮಾಡಿ ಕುಮಾರ ಸ್ವಾಮಿ ಮಹಿಳೆಯರ ಕಣ್ಣೀರು ಒರೆಸಿದ್ದಾರೆ ಯೋಗೀಶ್ ವಿ ಶೆಟ್ಟಿ ಹೇಳಿದರು.

ಜೆಡಿಎಸ್‌ ರಾಜ್ಯ ಮಾಧ್ಯಮ ವಕ್ತಾರರಾದ ಶಿವಮೊಗ್ಗ ಹಾಸನ ಉಸ್ತುವಾರಿ ಮಹೇಶ ಗೌಡ ಮಾತನಾಡಿ ಕಾರ್ಕಳ ಕ್ಷೇತ್ರದ ಹೆಬ್ರಿಯ ಜೆಡಿಎಸ್‌ ಸಮಾವೇಶ ಯಶಸ್ವಿಯಾಗಿ ಎಲ್ಲರಿಗೂ ಮಾದರಿಯಾಗಿದೆ, ಬದಲಾವಣೆಯ ಗಾಳಿ ಬೀಸುತ್ತಿದೆ, ಕರಾವಳಿಯಲ್ಲಿ ಅಶಾಂತಿ, ಕೋಮುಗಲಭೆ ಸೃಷ್ಠಿಸುವುದೇ ಬಿಜೆಪಿ ಟಯವರ ಕೊಡುಗೆಯಾಗಿದೆ, ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕೆ ಬಿಜೆಪಿ ಏನು ಮಾಡಿದೆ ಎಂದು ಪ್ರಶ್ನಿಸಿದರು.

ರಾಜ್ಯ ಮುಖಂಡ ಪ್ರವೀಣಚಂದ್ರ ಜೈನ್‌ ಮಾತನಾಡಿ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಮಾಡುವುದಾಗಿ ಬಿಜೆಪಿಯವರು ಬಿಲ್ಲವ ಸಮುದಾಯಕ್ಕೆ ಮೋಸ ಮಾಡಿದ್ದಾರೆ, ಬಜೆಟ್‌ ತಯಾರಿ ಮಾಡುವಾಗ ಸಚಿವರಾದ ಶ್ರೀನಿವಾಸ ಪೂಜಾರಿ, ಸುನಿಲ್‌ ಕುಮಾರ್‌ ಎಲ್ಲಿದ್ದರು. ಈಗ ಕಣ್ಣೋರೆಸುವ ತಂತ್ರ ಮಾಡುತ್ತಿದ್ದಾರೆ ಎಂದು ದೂರಿದರು. ಜನರು ಕಚೇರಿ ಕೆಲಸದಲ್ಲಿ ಅಲೆದಾಡಿ ಸುಸ್ತಾಗಿ ಶಾಸಕರ ಬಳಿಗೆ ಹೋದಾಗ ನೀವೇಕೆ ಇಲ್ಲಿ ಬಂದಿದ್ದೀರಿ ಅಧಿಕಾರಿಗಳಿಗೆ ಏನಾದರೂ ಸ್ವಲ್ಪ ಕೊಟ್ಟು ನಿಮ್ಮ ಕೆಲಸ ಮಾಡಿಸಿಕೊಳ್ಳಿ ಎಂದು ಹೇಳುವ ಶಾಸಕರು ನಮ್ಮ ಉಡುಪಿ ಜಿಲ್ಲೆಯಲ್ಲಿರುವುದು ನಮ್ಮ ದುರಂತ ಎಂದು ಮುಖಂಡ ಶ್ರೀಕಾಂತ್‌ ಅಡಿಗ ಹೇಳಿದರು.

ಕಾರ್ಕಳ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಧ್ಯಕ್ಷ ಶ್ರೀಕಾಂತ್‌ ಕುಚ್ಚೂರು ಮಾತನಾಡಿ ಸಾಮಾನ್ಯ ರಿಕ್ಷಾ ಚಾಲಕನಾಗಿ ಜನಸೇವೆ ಮಾಡುತ್ತಿರುವ ನನ್ನನ್ನು ಬೆಂಬಲಿಸಿ ಮುನ್ನಡೆಸಿ ಎಂದು ಮನವಿ ಮಾಡಿದರು.
ಮನೆಮನೆಗೆ ಕುಮಾರಣ್ಣನ ಕನಸಿನ ಯೋಜನೆ ಪಂಚರತ್ನದ ಉಡುಪಿ ಜಿಲ್ಲೆಯ ಕರಪತ್ರವನ್ನು ಹೆಬ್ರಿಯಲ್ಲಿ ಬಿಡುಗಡೆಗೊಳಿಸಿ ಹೆಬ್ರಿಯ ವಿವಿದೆಡೆ ಮನೆಮನೆಗೆ ತೆರಳಿ ಪಂಚರತ್ನ ಮನವಿಪತ್ರವನ್ನು ವಿತರಣೆ ಮಾಡಲಾಯಿತು. ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಮನ್ಸೂರ್‌ ಇಬ್ರಾಹಿಂ ಮರವಂತೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ಯುವ ಜನತಾದಳ ಅಧ್ಯಕ್ಷ ಸಂಜಯ್‌, ಪ್ರಮುಖರಾದ ಉದಯ ಶೆಟ್ಟಿ, ಮಾರುತಿ, ರಜಾಕ್‌, ರಮೇಶ ಕುಂದಾಪುರ, ಪೈಸಲ್‌ ಅಹಮ್ಮದ್‌, ಸುರೇಶ ದೇವಾಡಿಗ, ಹರೀಶ ಮುದ್ರಾಡಿ, ರಿಯಾಜ್‌ ಮುಂತಾದವರು ಉಪಸ್ಥಿತರಿದ್ದರು. ಸಯ್ಯದ್‌ ಹರ್ಷದ್‌ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!