ಕೆಮ್ಮಣ್ಣಿನ ತೂಗು ಸೇತುವೆ ದುರಸ್ಥಿಗೆ ಮುಂದಾದ ಉಡುಪಿ ಕೊಚ್ಚಿನ್ ಶಿಪ್’ ಯಾರ್ಡ್

ಕೆಮ್ಮಣ್ಣು: ಮಂಡಲ ಪಂಚಾಯತ್ ಕಾಲದಲ್ಲಿ ತಿಮ್ಮಣ್ಣಕುದ್ರುವಿನ ಜನರ ಸಂಪರ್ಕಕ್ಕಾಗಿ ಪಂಚಾಯತ್ ಅನುದಾನ, ಸ್ಥಳೀಯರ ದೇಣಿಗೆ ಮತ್ತು ಸುರತ್ಕಲ್ ಕೆಆರ್ ಇಸಿ ಕಾಲೇಜಿನ ಎನ್ ಸಿಸಿ ತಂಡದ ಪರಿಶ್ರಮದಲ್ಲಿ ಮಂಡಲ ಪ್ರಧಾನ ಬಿ.ರಾಮಚಂದ್ರ ಅವರ ನೇತೃತ್ವದಲ್ಲಿ ಗಿರೀಶ್ ಭಾರದ್ವಾಜ್ ರ ಉಸ್ತುವಾರಿಯಲ್ಲಿ ನಿರ್ಮಾಣಗೊಂಡಿದ್ದ ಪಡುಕುದ್ರು – ತಿಮ್ಮಣ್ಣಕುದ್ರು ನಡುವಿನ ತೂಗು ಸೇತುವೆ ಶಿಥಿಲಾವಸ್ಥೆಗೆ ತಲುಪಿತ್ತು. ಇದರ ದುರಸ್ಥಿಗೆ ಅನುದಾನ ಲಭ್ಯತೆಯ ಕೊರತೆ ಕಾಣಿಸಿಕೊಂಡಿದ್ದರಿಂದ ಗ್ರಾ ಪಂ ಆಡಳಿತ ಮಂಡಳಿ ಸೇತುವೆಯನ್ನು ಮುಚ್ಚುವ ತೀರ್ಮಾನ ಕೈಗೊಂಡು, ದುರಸ್ಥಿ ಆಗುವವರೆಗೆ ತಾತ್ಕಾಲಿಕವಾಗಿ ಸೇತುವೆಯನ್ನು ಮುಚ್ಚಿತ್ತು.

ಮುಚ್ಚುವ ಮೊದಲು ಹಲವಾರು ಮಾಧ್ಯಮಗಳು ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿದ್ದು ದುರಂತ ಸಂಭವಿಸುವ ಸಾಧ್ಯತೆಗಳಿರುವುದರ ಬಗ್ಗೆ ವರದಿ ಮಾಡಿದ್ದವು.

ಗುಜರಾತಿನ ಮೊರ್ಬಿಯಲ್ಲಿ ತೂಗು ಸೇತುವೆಯೊಂದು ಮುರಿದು ಬಿದ್ದ ಪರಿಣಾಮ ನೂರಾರು ಜನರು ದುರಂತದಿಂದ ಪ್ರಾಣವನ್ನು ಕಳೆದುಕೊಂಡ ಘಟನೆಯ ಬಳಿಕ ಸೇತುವೆ ದುರಸ್ಥಿಯ ಬಗ್ಗೆ ಹೆಚ್ಚಿನ ಒತ್ತಡವೂ ಬಂದಿತ್ತು. ಅದಕ್ಕೂ ಮೊದಲೇ ಗ್ರಾಮ ಪಂಚಾಯತ್ ಜಿಲ್ಲಾ ಪ್ರವಾಸೋದ್ಯಮ ಇಲಾಖೆ,ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಗೆ ಈ ಬಗ್ಗೆ ವರದಿ ಮಾಡಿ ದುರಸ್ಥಿಯ ಅನಿವಾರ್ಯತೆ ಮತ್ತದಕ್ಕೆ ಅನುದಾನ ಕೊರತೆ ಇರುವುದರ ಬಗ್ಗೆ ತಿಳಿಸಿದ್ದರೂ ಯಾವುದೇ ಸ್ಪಂದನೆ ಕಂಡು ಬಂದಿರಲಿಲ್ಲ.

ಮೊರ್ಬಿ ದುರಂತದ ಘಟನೆ ವರದಿಯಾದ ಬೆನ್ನಿಗೇ ಗ್ರಾ ಪಂ ಮತ್ತೊಮ್ಮೆ ಮನವಿ ಸಲ್ಲಿಸಿತ್ತಾದರೂ ಸರಿಯಾದ ಸ್ಪಂದನೆ ಇದ್ದಿರಲಿಲ್ಲ. ಆ ಬಳಿಕ ಮತ್ತೆ ಮಾಧ್ಯಮಗಳು ಮತ್ತು ಪೊಲೀಸ್ ಇಲಾಖೆಯೂ ಇಲ್ಲಿನ ಅಪಾಯ ಸ್ಥಿತಿಯ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದಾಗ ಜಿಲ್ಲಾ ಪಂಚಾಯತ್ ನವರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗೆ ಸೇತುವೆಯ ಸ್ಥಿತಿ ಗತಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದರು.

ಗ್ರಾ ಪಂ ಸೇತುವೆಯನ್ನು ಮುಚ್ಚಿದ ದಿನ ವಿಷಯ ತಿಳಿದ ಪ್ರವಾಸೋದ್ಯಮ ಇಲಾಖೆ ಇದರತ್ತ ಗಮನ ಹರಿಸಿತ್ತು.ಮಂಡಲ ಪಂಚಾಯತ್ ಕಾಲದಲ್ಲಿ ಸೇತುವೆ ನಿರ್ಮಿಸುವ ಜವಬ್ದಾರಿ ಹೊತ್ತಿದ್ದ ‘ತೂಗು ಸೇತುವೆಗಳ ಸರದಾರ’ ಖ್ಯಾತಿಯ ಸುಳ್ಯದ ಗಿರೀಶ್ ಭಾರದ್ವಾಜ್ ಅವರ ಭಾರತ್ ನಿರ್ಮಾಣ್ ತಂಡದ ಪ್ರತಿನಿಧಿಯವ ರನ್ನು ಕರೆಸಿ ಗ್ರಾ ಪಂ ನ ಪ್ರತಿನಿಧಿಗಳ ಜೊತೆ ಪರಿಶೀಲನೆ ನಡೆಸಿತ್ತು.

ಅದಕ್ಕಿಂತ ಮೊದಲು ಪಂ.ರಾಜ್ ಇಂಜಿನಿಯರಿಂಗ್ ಇಲಾಖೆಯವರೂ ಗಿರೀಶ್ ಭಾರದ್ವಾಜ್ ರ ತಂಡದೊಂದಿಗೆ ಸೇತುವೆಯನ್ನು ಪರಿಶೀಲಿಸಿ ದುರಸ್ಥಿಯ ಅನಿವಾರ್ಯತೆಯ ಬಗ್ಗೆ ಮತ್ತದಕ್ಕೆ 35.50 ಲಕ್ಷ ಅಂದಾಜು ವೆಚ್ಚ ತಗುಲಬಹುದಾಗಿ ವರದಿ ನೀಡಿದ್ದರು.

ಪ್ರವಾಸೋದ್ಯಮ ಇಲಾಖೆಯೂ ಪರಿಶೀಲನೆ ನಡೆಸಿದ ಬಳಿಕ ಗ್ರಾಪಂ ಗೆ ಪತ್ರ ಬರೆದು ಸೇತುವೆಯಲ್ಲಿ ಏಕ ಕಾಲಕ್ಕೆ 20 ಜನರನ್ನಷ್ಟೇ ಸಂಚರಿಸಲು ಅವಕಾಶ ಕಲ್ಪಿಸಿ 6 ತಿಂಗಳ ಕಾಲ ಮುಚ್ಚಿರುವುದನ್ನು ತೆರವುಗೊಳಿಸಬಹುದು ಎಂದು ಸೂಚಿಸಿ, ಇದರ ಸಂಪೂರ್ಣ ದುರಸ್ಥಿಯ ಬಗ್ಗೆ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಮೂಲಕ ಅನುದಾನ ಪಡೆಯುವ ಬಗ್ಗೆ ಪತ್ರ ಬರೆಯುವುದಾಗಿ ತಿಳಿಸಿತ್ತು.

ಸೇತುವೆಯು ಅಪಾಯಕಾರಿ ಸ್ಥಿತಿಯಲ್ಲಿರುವುದು ಖಚಿತ ಪಟ್ಟಿರುವುದರಿಂದ ಮತ್ತದರ ಪುನರ್ ನಿರ್ಮಾಣ ಅಗತ್ಯವಾಗಿದ್ದರೂ ಆ ಬಗ್ಗೆ ಯಾವುದೇ ಅನುದಾನ ಲಭ್ಯತೆಯ ಖಾತ್ರಿ ಇಲ್ಲದಿರುವುದರಿಂದ ಅನುದಾನ ಲಭ್ಯತೆ ಖಚಿತ ಪಟ್ಟ ಬಳಿಕವಷ್ಟೇ ಮುಚ್ಚಿರುವ ತೂಗು ಸೇತುವೆಯನ್ನು ತೆರವು ಗೊಳಿಸುವುದು ಜನರ ಪ್ರಾಣದ ಹಿತದೃಷ್ಟಿಯಿಂದ ಅಗತ್ಯ ಎಂದು ಭಾವಿಸಿದ ಗ್ರಾ ಪಂ ಆಡಳಿತ ಮಂಡಳಿ ಅದರಂತೆ ನಿರ್ಣಯ ಕೈಗೊಂಡು ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾ ಪಂಚಾಯತಿಗೆ ಕಳುಹಿಸಿತ್ತು.

ಸದ್ಯ ತೂಗು ಸೇತುವೆಯ ಬದಲು ತಿಮ್ಮಣ್ಣಕುದ್ರುವಿನ ಜನರ ಸಂಪರ್ಕಕ್ಕೆ ಘನವಾಹನ ಸಂಚಾರಕ್ಕೆ ಅನುಕೂಲವಾಗಿರುವ ಹೊಸ ಸೇತುವೆ ನಿರ್ಮಾಣ ಆಗಿರುವುದರಿಂದ ಈ ತೂಗು ಸೇತುವೆಯು ಪ್ರವಾಸೋದ್ಯಮಕ್ಕೆ ಮಾತ್ರ ಬಳಕೆ ಆಗುತ್ತಿರುವುದು. ಸೇತುವೆಯ ಎರಡು ಬದಿಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಅನುಮತಿ ಪಡೆದ ಕಾಯಕಿಂಗ್ ಬೋಟಿಂಗ್ ನಡೆಯುತ್ತಿರುವುದಕ್ಕೆ ತೂಗು ಸೇತುವೆ ಮುಚ್ಚಿರುವುದರಿಂದ ತೊಂದರೆಗಳಾಗಿ ಪ್ರವಾಸೋದ್ಯಮದ ಬೆಳವಣಿಗೆಗೆ ತೊಡಕುಂಟಾಗುತ್ತಿರುವುದರ ಬಗ್ಗೆಯೂ ಜಿಲ್ಲಾಡಳಿತ ಗಮನಹರಿಸಿದಂತಿದೆ.ಆ ಹಿನ್ನಲೆಯಲ್ಲಿ ಕೇಂದ್ರ ಸರಕಾರದ ಅಧೀನದ ಮಲ್ಪೆಯಲ್ಲಿ ಶಿಪ್ ಯಾರ್ಡ್ ಉದ್ಯಮ ನಡೆಸುತ್ತಿರುವ ಉಡುಪಿ ಕೊಚಿನ್ ಶಿಪ್ ಯಾರ್ಡ್ ಅನ್ನು ಸಂಪರ್ಕಿಸಲಾಗಿದೆ.

ಇದರ ಮುಂದುವರಿಕೆಯಾಗಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ಗುರುವಾರ ಈ ಬಗ್ಗೆ ತಂಡವೊಂದನ್ನು ಕಳುಹಿಸಿದ್ದಾರೆ.
ಆ ತಂಡದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀನಾಥ್, ಉಡುಪಿ ಕೊಚಿನ್ ಶಿಪ್ ಯಾರ್ಡಿನ ಮ್ಯಾನೇಜರ್ ಶಶಿಕಾಂತ್ ಕೋಟ್ಯಾನ್, ಶಿಪ್ ಯಾರ್ಡಿನ ಸಿವಿಲ್ ಇಂಜಿನಿಯರ್, ಗಿರೀಶ್ ಭಾರದ್ವಾಜ್ ರ ಭಾರತ್ ನಿರ್ಮಾಣ್ ತಂಡದ ಪ್ರತಿನಿಧಿಗಳಿದ್ದು, ಗ್ರಾಪಂ ನ ಪ್ರತಿನಿಧಿಗಳ ಜೊತೆ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ತೂಗು ಸೇತುವೆಯ ದುರಸ್ಥಿಗೆ ಅಂದಾಜು ರೂ.50 ಲಕ್ಷ ವೆಚ್ಚವಾಗುವ ಸಾಧ್ಯತೆಯನ್ನು ಅಂದಾಜಿಸಲಾಗಿದ್ದು, ಇದನ್ನು ಶಿಪ್ ಯಾರ್ಡ್ ನಿಂದ ಮಾಡಿಸಲು ಸಿದ್ಧವಿರುವುದಾಗಿ ಮ್ಯಾನೆಜರ್ ಶಶಿಕಾಂತ್ ತಿಳಿಸಿದ್ದಾರೆ.

ಇದರ ಬಗ್ಗೆ ಪಂ.ರಾಜ್ ಇಂಜಿನಿಯರಿಂಗ್ ಇಲಾಖೆ ಯವರು ನೀಡುವ ವರದಿಯಂತೆ ಜಿಲ್ಲಾಡಳಿತ ಸಂಸ್ಥೆಗೆ ಆದೇಶ ಹೊರಡಿಸಿದ್ದಲ್ಲಿ ಭಾರಾಧ್ವಾಜ್ ಸಂಸ್ಥೆಯ ಪರಿಣಿತ ಸಿಬಂದಿಗಳ ತೊಡಗಿಸಿಕೊಳ್ಳುವಿಕೆಯಿಂದ ಕಾಮಗಾರಿ ನಡೆಸಲು ಉಡುಪಿ ಕೊಚಿನ್ ಶಿಪ್ ಯಾರ್ಡ್ ತಯಾರಾಗಿದೆ ಎಂದು ಅವರು ತಿಳಿಸಿದ್ದಾರೆ.

ಪರಿಶೀಲನೆಯ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷೆ ಲತಾ, ಪಿಡಿಓ ಕಮಲಾ, ಕಾರ್ಯದರ್ಶಿ ದಿನಕರ್, ಸಿಬ್ಬಂದಿಗಳಾದ ಸಂತೋಷ್, ಪ್ರಕಾಶ್ ಸದಸ್ಯರುಗಳಾದ ಆಶಾ, ಯಶೋದಾ, ಹೈದರ್ ಆಲಿ, ಡಾ.ಫಹೀಮ್ ಅಬ್ದುಲ್ಲಾ ಮತ್ತಿತರರು ಜೊತೆಗಿದ್ದರು.

Leave a Reply

Your email address will not be published. Required fields are marked *

error: Content is protected !!