ನಾಟಕದಲ್ಲಿ ಅಂಬೇಡ್ಕರ್‌ಗೆ ಅವಮಾನ- ಡೀನ್ ಬಂಧನ, ಬಂಧಿತರ ಸಂಖ್ಯೆ 9ಕ್ಕೆ ಏರಿಕೆ

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿದ್ದ ಆರೋಪದಡಿ ಜೈನ್ ವಿಶ್ವವಿದ್ಯಾಲಯ ‍ಪ್ರವೇಶಾತಿ ವಿಭಾಗದ ಡೀನ್ ದಿನೇಶ್ ನೀಲಕಂಠ್ ರನ್ನು ಪೊಲೀಸರು ಸೋಮವಾರ ಬಂಧಿಸಿದ್ದು, ಆ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

ನಿಮ್ಹಾನ್ಸ್ ಸಭಾಂಗಣದಲ್ಲಿ ಫೆಬ್ರವರಿ 8ರಂದು ವಿಶ್ವವಿದ್ಯಾಲಯದ ‘ಕಾಲೇಜು ಉತ್ಸವ’ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಪ್ರದರ್ಶಿಸಿದ್ದ ಕಿರುನಾಟಕದಲ್ಲಿ ಬಿ.ಆರ್‌. ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿರುವುದಾಗಿ ಆರೋಪಿಸಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎನ್. ಮಧುಸೂದನ್ ದೂರು ನೀಡಿದ್ದರು. ಎಸ್.ಸಿ–ಎಸ್‌.ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡಿರುವ ಜಯನಗರ ಉಪವಿಭಾಗದ ಎಸಿಪಿ ನೇತೃತ್ವದ ತಂಡ, ವಿಶ್ವವಿದ್ಯಾಲಯದ ಡೀನ್ ದಿನೇಶ್ ನೀಲಕಂಠ್, ಕಾರ್ಯಕ್ರಮ ಸಂಘಟಕ ಪ್ರತೀಕ್, ಕಿರುನಾಟಕದಲ್ಲಿ ಅಭಿನಯಿಸಿದ್ದ 7 ವಿದ್ಯಾರ್ಥಿಗಳನ್ನು ಬಂಧಿಸಿದೆ.

‘ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿದ್ದ ವಿಡಿಯೊ ಲಭ್ಯವಾಗಿತ್ತು. ಅದನ್ನು ಪರಿಶೀಲಿಸಿ ಆಡಳಿತ ಮಂಡಳಿ ನಿರ್ದೇಶಕರು, ಡೀನ್‌ ಹಾಗೂ ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಲಾಗಿತ್ತು. ಉತ್ಸವಕ್ಕೂ ಮುನ್ನ ಕಿರುನಾಟಕ ತಯಾರಿ ನಡೆದಿತ್ತು. ಅಂಬೇಡ್ಕರ್ ಬಗ್ಗೆ ಅವಹೇಳನ ಸಂಭಾಷಣೆ ಇದ್ದರೂ ಕಿರುನಾಟಕ ಪ್ರದರ್ಶಿಸಲು ಆಡಳಿತ ಮಂಡಳಿ ಒಪ್ಪಿಗೆ ನೀಡಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ದಿನೇಶ್, ವಿಶ್ವವಿದ್ಯಾಲಯ ಅಧೀನದ 2 ಕಾಲೇಜುಗಳ ಉಸ್ತುವಾರಿ ವಹಿಸಿಕೊಂಡಿದ್ದರು. ಅವಹೇಳನಕ್ಕೆ ಎಲ್ಲರೂ ಹೊಣೆಗಾರರು. ಪ್ರಕರಣ ಸಂಬಂಧ ಹಲವು ಪುರಾವೆಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!