ಒಂದು ಪಕ್ಷಕ್ಕೆ ಹಾಕಿದ ಮತ ಇನ್ನೊಂದು ಪಕ್ಷಕ್ಕೆ- ಇವಿಎಂ ಪ್ರಾತ್ಯಕ್ಷಿಕೆಯಲ್ಲಿ ಗೊಂದಲ!

ಉಡುಪಿ ಫೆ.13(ಉಡುಪಿ ಟೈಮ್ಸ್ ವರದಿ): ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಪು ತಹಶೀಲ್ದಾರರ ನಿರ್ದೇಶನದಂತೆ 92ನೇ ಹೇರೂರು ಇಲ್ಲಿನ ಅಂಗನವಾಡಿ ಕೇಂದ್ರದ ಚುನಾವಣಾ ಬೂತ್ ನಂಬ್ರ 121 ರಲ್ಲಿ ಮತದಾನ ಯಂತ್ರ ಇವಿಎಂ ಪ್ರದರ್ಶನ ನಡೆಯಿತು. 

ಜನರಲ್ಲಿ ಇವಿಎಂ ಯಂತ್ರದ ಅರಿವು ಮತ್ತು ಮತ ಹಾಕುವ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಈ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ತರಬೇತಿಯಲ್ಲಿ ಇವಿಎಂ ಮಿಷನ್ ನಲ್ಲಿ ಮತದಾರರು ಹಾಕಿದ ಮತ, ಬೇರೇನೇ ಪಕ್ಷಕ್ಕೆ ಹೋಗುವುದು ಕಂಡು ಬಂದಿದೆ.

ಈ ಬಗ್ಗೆ ತರಬೇತಿ ಕಾರ್ಯಕ್ರಮ ಆಯೋಜಕರನ್ನು ತರಾಟೆಗೆ ತೆಗೆದುಕೊಂಡ ಮತದಾರರು ಇಂತಹ ತರಬೇತಿ ಕಾರ್ಯಕ್ರಮದಲ್ಲಿ ಹೀಗೆ ತಪ್ಪು ನಡೆದರೆ ಮುಂದೆ ಚುನಾವಣಾ ಸಮಯದಲ್ಲಿ ಕೂಡ ತಪ್ಪು ಮತದಾನ ನಡೆಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿ ಅಲ್ಲಿಂದ ತೆರಳಿದ ಘಟನೆಯೂ ನಡೆದಿದೆ.

ಇವಿಎಂ ಯಂತ್ರದಲ್ಲಿ ಮತದಾನ ಪದ್ದತಿ ಹಲವು ವರುಷಗಳ ಹಿಂದೆ ಬಂದಿದೆಯಾದರೂ ಚುನಾವಣೆಗೂ ಮುನ್ನ ಮತದಾರರಲ್ಲಿ ಜಾಗೃತಿ, ಅರಿವು ಮೂಡಿಸುವ ಸಲುವಾಗಿ ಇಂತಹ ತರಬೇತಿಗಳನ್ನು ಆಯೋಜಿಸಲಾಗುತ್ತದೆ. ಇಂದು ಹೇರೂರಿನ ಬೂತ್ ನಂ.121 ನ ಜೊತೆಗೆ ಸೆಕ್ಟರ್ 9 ರ ಮತಗಟ್ಟೆ 122 ರಿಂದ 127 ರ ವರೆಗೆ ಸಂಜೆ 4.30 ರ ತನಕ ಇವಿಎಂ ಯಂತ್ರದ ಮಾಹಿತಿ ಶಿಬಿರ ಆಯೋಜಿಸಿದ್ದು ಅಲ್ಲಿಯೂ ಈ ರೀತಿಯ ಇವಿಎಂ ಯಂತ್ರದ ಸಮಸ್ಯೆ ಕಂಡು ಬಂದರೆ ಇದು ಚುನಾವಣೆಯ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *

error: Content is protected !!