ಉಡುಪಿ: ಮುಂದಿನ ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನ ದ.ಕ ಜಿಲ್ಲೆಗೆ ನಿರ್ಣಯ

ಉಡುಪಿ: ಮುಂದಿನ ರಾಜ್ಯಮಟ್ಟದ ಸಮಗ್ರಯಕ್ಷಗಾನ ಸಮ್ಮೇಳನವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸುವ ಬಗ್ಗೆ ನಿರ್ಣಯವನ್ನು ಇಂದು ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆದ ಯಕ್ಷಗಾನ ಸಮ್ಮೇಳನದ ಸಮಾರೋಪದಲ್ಲಿ ತೆಗೆದುಕೊಳ್ಳಲಾಯಿತು.
ಇಂದು ಸಮ್ಮೇಳನದಲ್ಲಿ ತೆಗೆದುಕೊಂಡು ಪ್ರಮುಖ ನಿರ್ಣಯಗಳು: 

1.ಯಕ್ಷಗಾನ ಸಮ್ಮೇಳನದಲ್ಲಿ ಮಂಡಿಸಿದ ನಿರ್ಣಯಗಳು ಸಮ್ಮೇಳನಾಧ್ಯಕ್ಷರು ಸೂಚಿಸಿರುವ ಯಕ್ಷಗಾನ ಸಂಬಂಧಿ ಪ್ರಸ್ತಾವಗಳನ್ನು ಸರ್ಕಾರ ಪರಿಗಣಿಸಿ ಸೂಕ್ತ ಸಮಿತಿ ರಚಿಸಿ ವರದಿ ಪಡೆದು ಕಾಲಮಿತಿಗೊಳಪಟ್ಟು ಜಾರಿಗೊಳಿಸಬೇಕು.

2.ಸಾಂಸ್ಕೃತಿಕವಾಗಿ ಕರ್ನಾಟಕದ ಭಾಗವೇ ಆಗಿರುವ ಕಾಸರಗೋಡನ್ನು ಸರ್ಕಾರದ ಸಾಂಸ್ಕೃತಿಕ ನೀತಿಯನ್ನು ಸದಾ ವಿಶೇಷ ಪರಿಗಣನೆಯಲ್ಲಿಟ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು.

3.ಸರ್ಕಾರದ ವಿವಿಧ ಅಧಿಕೃತ ಪ್ರಶಸ್ತಿ, ಸಾಂಸ್ಕೃತಿಕ ಉತ್ಸವ, ಮನ್ನಣೆ, ವಿವಿಧ ಸಮಿತಿಗಳ, ಅಕಾಡೆಮಿಗಳ ಸದಸ್ಯತ್ವಗಳಲ್ಲಿ ಕಾಸರಗೋಡಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು.

4.ಸಮಗ್ರ ಕರ್ನಾಟಕದ ಯಕ್ಷಗಾನ ಮತ್ತು ಇತರ ಸಾಂಪ್ರದಾಯಿಕ ಬಯಲಾಟಗಳ ವೃತ್ತಿನಿರತ ಕಲಾವಿದರು, ರಂಗಕರ್ಮಿಗಳು ಮತ್ತು ರಂಗ ಸಹಾಯಕರಿಗೆ ಕಲ್ಯಾಣ ಕಾರ್ಯಕ್ರಮ ಯೋಜನೆ ಜಾರಿಗೊಳಿಸಿ ಸಹಾಯಧನ, ಕ್ಷೇಮನಿಧಿ, ನಿವೃತ್ತಿ ಮಾಸಾಶನ, ಆರೋಗ್ಯ ವಿಮೆ ಕೊಡಬೇಕು.

5.ಸಮ್ಮೇಳನದ ಮಾದರಿಯಲ್ಲಿ ವಿಸ್ತೃತ ಆಯಾಮಗಳೊಂದಿಗೆ ನಿಶ್ಚಿತ ಅವಧಿಯ ಅಂತರದಲ್ಲಿ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ಮುಂದೆಯೂ ನಿರಂತರವಾಗಿ ನಡೆಸಬೇಕು.

6.ಕಲಾವಿದರ ಗೌರವ ಮಾಸಾಶನವನ್ನು ಐದು ಸಾವಿರಕ್ಕೆ ಏರಿಸಬೇಕು.

7.ಯಕ್ಷ ರಂಗಾಯಣವನ್ನು ಯಕ್ಷಗಾನ ಅಸ್ತಿತ್ವದಲ್ಲಿರುವ ಇತರ ಜಿಲ್ಲೆಗಳಿಗೂ ವಿಸ್ತರಿಸಬೇಕು.

8.ರಾಷ್ಟ್ರೀಯ ನಾಟಕ ಶಾಲೆಯ ಮಾದರಿಯಲ್ಲಿ ರಾಷ್ಟ್ರೀಯ ಯಕ್ಷಗಾನ ಶಾಲೆ ರಚನೆ ಆಗಬೇಕು.

9.ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನಕ್ಕೆ ನಾಂದಿ ಹಾಡಿರುವ ಸರ್ಕಾರ ಮುಂದೆ ವಿಶ್ವ ಯಕ್ಷಗಾನ ಸಮ್ಮೇಳನ ನಡೆಸಬೇಕು

10.ಕೇರಳದಲ್ಲಿ ಕಥಕ್ಕಳಿ, ಒಡಿಶಾದಲ್ಲಿ ಒಡಿಸ್ಸಿ ಕಲೆಯನ್ನು ರಾಜ್ಯದ ಪ್ರಾತಿನಿಧಿಕ ಕಲೆ ಎಂದು ಪರಿಗಣಿಸಿರುವಂತೆ ಕರ್ನಾಟಕ ರಾಜ್ಯದಲ್ಲಿಯೂ ಯಕ್ಷಗಾನ ಕಲೆಯನ್ನು ಪ್ರಾತಿನಿಧಿಕ ಕಲೆ ಎಂದು ಪರಿಗಣಿಸಬೇಕು.

11.ಶೈಕ್ಷಣಿಕ ಪಠ್ಯಗಳಲ್ಲಿ ಹಂತಹಂತವಾಗಿ ಪರಿಚಯಾತ್ಮಕವಾಗಿ ಯಕ್ಷಗಾನದ ವಿಷಯಗಳನ್ನು ಸೇರಿಸಬೇಕು ಔಪಚಾರಿಕ ಶಿಕ್ಷಣದಲ್ಲಿ ಡಿಪ್ಲೊಮೋ, ಸರ್ಟಿಫಿಕೇಟ್ ಕೋರ್ಸ್‌  ಆರಂಭಕ್ಕೆ ಪ್ರಾಶಸ್ತ್ಯ ನೀಡಬೇಕು.

12.ಪ್ರತಿ ವರ್ಷ ನಡೆಯುವ ಯಕ್ಷಗಾನ ಸಮ್ಮೇಳನವನ್ನು ಎಲ್ಲರಿಗೂ ಅನುಕೂಲವಾಗುವಂತೆ 6 ತಿಂಗಳು ಮೊದಲೇ ದಿನಾಂಕ ನಿರ್ಧರಿಸಬೇಕು.

Leave a Reply

Your email address will not be published. Required fields are marked *

error: Content is protected !!