ಉಡುಪಿ: ನಿರ್ಲಕ್ಷ್ಯದ ಬಸ್ ಚಾಲನೆ- ಇಬ್ಬರ ಸಾವು, ಚಾಲಕ ಮತ್ತು ನಿರ್ವಾಹಕರ ಬಂಧನ

ಉಡುಪಿ ಡಿ.5 (ಉಡುಪಿ ಟೈಮ್ಸ್ ವರದಿ): ಕಾರ್ಕಳ ಹಾಗೂ ಶಂಕರನಾರಾಣ ಠಾಣಾ ವ್ಯಾಪ್ತಿಯಲ್ಲಿ ನಡೆದ ಬಸ್ಸಿನಿಂದ ಬಿದ್ದು ಪ್ರಯಾಣಿಕರು ಮೃತಪಟ್ಟ ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿ ಬಸ್ಸಿನ ಚಾಲಕ ಹಾಗೂ  ಇಬ್ಬರು ನಿರ್ವಾಹಕರನ್ನು ಸೇರಿ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ಬಸ್ಸಿನ ನಿರ್ವಾಹಕ ಪೆರ್ಡೂರಿನ ಬಾಳೆಬೈಲು ನಿವಾಸಿ ಜಯಪ್ರಕಾಶ್ ಶೆಟ್ಟಿ(60), ಶಂಕರನಾರಾಯಣ ಠಾಣಾ ವ್ಯಾಪ್ತಿಯ ಪ್ರಕರಣದಲ್ಲಿ ಬಸ್ಸಿನ ನಿರ್ವಾಹಕ ಶಿವಮೊಗ್ಗದ ತೀರ್ಥಹಳ್ಳಿಯ ಮಂಜುನಾಥ(31) ಹಾಗೂ ಚಾಲಕ ವಿಶ್ವನಾಥ ಶೆಟ್ಟಿ(53) ಬಂಧಿತ ಆರೋಪಿಗಳು.

ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣದಲ್ಲಿ ಹಿರ್ಗಾನ ಗ್ರಾಮದ ಬಸ್ ನಿಲ್ದಾಣದ ಬಳಿ ಡಿ.4 ರಂದು ಕೃಷ್ಣ ನಾಯ್ಕ್(70) ಎಂಬವರು ಬಸ್ಸನ್ನು ಹತ್ತಲು ಪ್ರಯತ್ನಿಸುತ್ತಿದ್ದ ವೇಳೆ  ಇವರು ಬಸ್ಸ್ ಹತ್ತುವ ಮೊದಲೇ ಬಸ್ಸಿನ ನಿರ್ವಾಹಕ ಜಯಪ್ರಕಾಶ್ ಶೆಟ್ಟಿ ನಿರ್ಲಕ್ಷ್ಯ ತನದಿಂದ ಬಸ್ ಚಾಲನೆಗೆ ಸೂಚನೆ ನೀಡಿದ್ದರಿಂದ ಚಾಲಕ ಬಸ್ ಮುಂದಕ್ಕೆ ಚಲಾಯಿಸಿದ ಕಾರಣ ಕೃಷ್ಣ ನಾಯ್ಕ್ ಅವರು ಬಸ್ಸಿನಿಂದ ಬಿದ್ದು ಗಂಭೀರ ಗಾಯಗೊಂಡು ಮೃತ ಪಟ್ಟಿದ್ದರು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ನಿರ್ವಾಹಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಮತ್ತೊಂದೆಡೆ ಶಂಕರ ನಾರಾಯಣ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣದಲ್ಲಿ ನ.26 ರಂದು ಹೆಬ್ರಿಯ ಅಲ್ಬಾಡಿ ಗ್ರಾಮದ ಕೊಂಚಾಡಿ ಹಳೆನೀರು ಬೆಟ್ಟಿ ಎಂಬಲ್ಲಿ ಚಂದ್ರಶೇಖರ ನಾಯ್ಕ್(65) ಎಂಬವರು  ಬಸ್ಸಿನಿಂದ ಇಳಿಯುತ್ತಿದ್ದಾಗ ಇವರು ಇಳಿಯುವ ಮೊದಲೇ ನಿರ್ವಾಹಕ ಮಂಜುನಾಥ ಬಸ್ ಚಾಲನೆಗೆ ಸೂಚನೆ ನೀಡಿದ ಪರಿಣಾಮ ಬಸ್ ಚಾಲಕ ಬಸ್ಸನ್ನು ಮುಂದಕ್ಕೆ ಚಲಾಯಿಸಿದ ಕಾರಣ ಚಂದ್ರಶೇಖರ ನಾಯ್ಕ್ ಅವರು ರಸ್ತೆಗೆ ಬಿದ್ದು ಬಸ್ಸಿನ ಚಕ್ರದಡಿಗೆ ಸಿಲುಕಿ ಗಂಭೀರಗೊಂಡು ಮೃತಪಟ್ಟಿದ್ದರು.

ಇದೀಗ ಎರಡೂ ಪ್ರಕರಣದಲ್ಲಿ ಚಾಲಕ ಹಾಗೂ ನಿರ್ವಾಹಕರ ನಿರ್ಲಕ್ಷ್ಯತನದ ಕಾರಣದಿಂದ ಇಬ್ಬರು ವ್ಯಕ್ತಿಗಳು ಮೃತಪಟ್ಟ ಕಾರಣ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಾಗೂ ಇತ್ತೀಚಿನ ದಿನಗಳಲ್ಲಿ ಬಸ್‍ಗಳಲ್ಲಿ ಬಸ್ಸಿನ ನಿರ್ವಾಹಕ ಹಾಗೂ ಬಸ್ಸಿನ ಚಾಲಕರ ನಿರ್ಲಕ್ಷತನದಿಂದ ಪ್ರಯಾಣಿಕರು ಇಳಿಯುವ ಮತ್ತು ಏರುವ ಮೊದಲೇ ಬಸ್ಸನ್ನು ಚಲಾಯಿಸುವುದು ಹಾಗೂ ಅತೀಯಾದ ಪ್ರಯಾಣಿಕರನ್ನು ತುಂಬಿಸಿಕೊಂಡು, ಫುಟ್‍ಬೋರ್ಡ್ ಮೇಲೆ ನೇತಾಡಿಕೊಂಡು ಪ್ರಯಾಣಿಸುವಷ್ಟು ಪ್ರಯಾಣಿಕರನ್ನು ಸಾಗಿಸುತ್ತಿರುವುದು, ಅಪಘಾತ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿರುತ್ತದೆ. ಈ ಘಟನೆಗಳಿಗೆ ನೇರವಾಗಿ ಕಾರಣವಾಗುವ ಬಸ್ಸಿನ ಚಾಲಕ ಹಾಗೂ ನಿರ್ವಾಹಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ. 

Leave a Reply

Your email address will not be published. Required fields are marked *

error: Content is protected !!