ಜಿಲ್ಲಾ ಆಸ್ಪತ್ರೆಗಳಲ್ಲಿ 24X7 ಸಹಾಯವಾಣಿ: ಡಾ.ಕೆ.ಸುಧಾಕರ್

ತುಮಕೂರು: ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ 24X7 ಕಾರ್ಯ ನಿರ್ವಹಿಸುವ ಸಹಾಯವಾಣಿ ತೆರೆಯಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿ, ‘ರೋಗಿಗಳಿಗೆ ಸಹಾಯ ಮಾಡುವ ಸಲುವಾಗಿ ಸಹಾಯವಾಣಿ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಪ್ರತಿ ಸಹಾಯವಾಣಿಗೆ 4 ಸಿಬ್ಬಂದಿ ನಿಯೋಜಿಸಲಾಗುತ್ತದೆ. ಪ್ರತಿ ಪಾಳಿಯಲ್ಲಿ ಇಬ್ಬರು ಕೆಲಸ ನಿರ್ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಜೇರಿಯನ್ ಹೆರಿಗೆ ಕಡಿಮೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಲಾಗಿದೆ. ಅದಕ್ಕಾಗಿ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಜಿಲ್ಲಾ ವೈದ್ಯಾಧಿಕಾರಿ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ತಾಲ್ಲೂಕುವೈದ್ಯಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿಯಲ್ಲಿ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞ ವೈದ್ಯರು, ಅರಿವಳಿಕೆ ವೈದ್ಯ ರನ್ನು ಒಳಗೊಂಡ ತಂಡ ಇರುತ್ತದೆ. ಈ ಸಮಿತಿ ಸಿಜೇರಿಯನ್ ಹೆರಿಗೆ ಮಾಡಬೇಕೇ, ಬೇಡವೇ ಎಂಬುದನ್ನು ನಿರ್ಧರಿಸಲಿದೆ’ ಎಂದರು.

‘ಕೆಲ ಆಸ್ಪತ್ರೆಗಳಲ್ಲಿ ಶೇ 40 ರಿಂದ ಶೇ 50ರಷ್ಟು ಸಿಜೇರಿಯನ್ ಹೆರಿಗೆ ಮಾಡಿಸಲಾಗುತ್ತಿದೆ. ಈ ಪ್ರಮಾಣವನ್ನು ಶೇ 20– 40ಕ್ಕೆ ಇಳಿಸಬೇಕಾಗಿದೆ. ಅದಕ್ಕಾಗಿ ಸಮಿತಿ ರಚಿಸಲಾಗಿದೆ. ಜತೆಗೆ ಕಾನೂನು ರೂಪಿಸಿ, ಅನಗತ್ಯವಾಗಿ ಸಿಜೇರಿಯನ್ ಹೆರಿಗೆ ಮಾಡಿಸುವುದಕ್ಕೂ ಕಡಿವಾಣ ಹಾಕಲಾಗುವುದು’ ಎಂದರು.

ಜನವರಿಯಿಂದ ಹೊಸ ವ್ಯವಸ್ಥೆ: 108 ಆಂಬುಲೆನ್ಸ್ ಸಿಬ್ಬಂದಿ ಮುಷ್ಕರದ ಬೆದರಿಕೆ ಹಾಕಿರುವ ಸಂಬಂಧ ಪ್ರತಿಕ್ರಿ ಯಿಸಿದ ಅವರು, 108 ಆಂಬುಲೆನ್ಸ್‌ ಸಿಬ್ಬಂದಿ ವೇತನ ಬಾಕಿ ಪಾವತಿ ಸಮಸ್ಯೆ ಪರಿಹರಿಸಲಾಗುವುದು. ಈಗಿರುವ ವ್ಯವಸ್ಥೆ ಡಿಸೆಂಬರ್‌ವರೆಗೂ ಮುಂದು ವರಿಯಲಿದ್ದು, ನಂತರ ಹೊಸದಾಗಿ ಟೆಂಡರ್ ಕರೆದು ಅರ್ಹರಿಗೆ ಗುತ್ತಿಗೆ ನೀಡಲಾಗುವುದು’ ಅವರು ಎಂದು ಹೇಳಿದರು.

ತಬ್ಬಲಿ ಬಾಲಕಿಗೆ ರೂ.10 ಲಕ್ಷ ನೆರವು
‘ತುಮಕೂರು ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ದಿಂದಲೇ ತಾಯಿ ಮತ್ತು ಅವಳಿ ಶಿಶುಗಳು ಸಾವನ್ನಪ್ಪಿವೆ. ಆರೋಗ್ಯ ಇಲಾಖೆ ಆಯುಕ್ತರು ತನಿಖೆ ನಡೆಸುತ್ತಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸುಧಾಕರ್ ಹೇಳಿದರು.

ಘಟನೆ ನಡೆದ ದಿನ ಕರ್ತವ್ಯದಲ್ಲಿದ್ದ ಡಾ.ಉಷಾ, ತಮ್ಮದೇನೂ ತಪ್ಪಿಲ್ಲ ಎಂದು ಸರ್ಕಾರಿ ವೈದ್ಯರ ಸಂಘಕ್ಕೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾನು ಸಿ.ಸಿ ಟಿ.ವಿ ಕ್ಯಾಮೆರಾ ದೃಶ್ಯಾವಳಿ ಗಮನಿಸಿದ್ದೇನೆ. ಮೃತ ಮಹಿಳೆ ಹಾಗೂ ವೈದ್ಯೆ ಉಷಾ ಒಟ್ಟಿಗೆ ಇರುವುದನ್ನು ಗಮನಿಸಿದ ನಂತರವೇ ಅಮಾನತು ಮಾಡಲಾಗಿದೆ. ಇದು ಏಕಪಕ್ಷೀಯ ನಿರ್ಧಾರವಲ್ಲ’ ಎಂದು ಸ್ಪಷ್ಟಪಡಿಸಿದರು.

‘ಚಿಕಿತ್ಸೆ ಸಿಗದೆ ಮೃತಪಟ್ಟ ಮಹಿಳೆಯ ತಬ್ಬಲಿ ಪುತ್ರಿಗೆ ಆರೋಗ್ಯ ಇಲಾಖೆಯಿಂದ ರೂ.10 ಲಕ್ಷ ನೆರವು ನೀಡಲು ನಿರ್ಧರಿಸಲಾಗಿದೆ. ಹಣವನ್ನು ಬಾಲಕಿ ಹೆಸರಲ್ಲಿ ಠೇವಣಿ ಇಡಲಾಗುತ್ತದೆ. ಆಕೆಗೆ 18 ವರ್ಷ ತುಂಬಿದ ಬಳಿಕ ಹಣ ಕೈ ಸೇರಲಿದೆ’ ಎಂದು ಸಚಿವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!