ಸಹಕಾರ ಸಂಸ್ಥೆಗೆ ಕೆಟ್ಟ ಹೆಸರು ತರುವ ಸಂಸ್ಥೆಗಳಿಗೆ ಕಡಿವಾಣ: ಎಸ್.ಟಿ ಸೋಮಶೇಖರ್
ಬೆಂಗಳೂರು, ನ.12: ರಾಜ್ಯದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಸೊಸೈಟಿಗಳಿದ್ದು, ನಾಲ್ಕೈದು ಸಂಸ್ಥೆಗಳಿಂದ ಸಹಕಾರ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಸಹಕಾರ ಸಂಸ್ಥೆಗೆ ಕೆಟ್ಟ ಹೆಸರು ತರುವ ಸಂಸ್ಥೆಗಳಿಗೆ ಕಡಿವಾಣ ಹಾಕಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ನಗರದ ವಿವಿ ಪುರಂನ ವಾಸವಿ ಸಭಾಂಗಣದಲ್ಲಿ ಧರ್ಮದೃಷ್ಟಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ನ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಸೊಸೈಟಿಗಳ ಕಾರ್ಯವೈಖರಿಯನ್ನು ರಿಸರ್ವ್ ಬ್ಯಾಂಕ್ ಗಮನಹರಿಸುತ್ತಿದೆ. ಕ್ರೆಡಿಟ್ ಸೊಸೈಟಿಗಳು ರಾಜ್ಯದಲ್ಲಿ ಅಣಬೆ ತರಹ ಹುಟ್ಟುತ್ತಿವೆ, ಹಾಗೆಯೇ ನಾಶವಾಗುತ್ತಿವೆ. ಇದಕ್ಕೆ ಬಲಿಯಾಗದೆ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಬಹಳ ವೇಗವಾಗಿ ಬೆಳೆದಿದೆ. ಸಹಕಾರ ಸಂಸ್ಥೆಯನ್ನು ಬೆಳೆಸಬೇಕು ಎಂಬ ಕಾಳಜಿ ಇರುವವರು ಸೌಹಾರ್ದ ಸಂಸ್ಥೆಯನ್ನು ವ್ಯವಸ್ಥಿತವಾಗಿ ಬೆಳೆಸುತ್ತಿದ್ದಾರೆ ಎಂದು ಎಂದರು.
ಕಾರ್ಯಕ್ರಮದಲ್ಲಿ ಸೊಸೈಟಿಯ ಚೀಫ್ ಪ್ರಮೋಟರ್ ಡಾ.ಬಿ.ಎಸ್.ವಿಶ್ವ ಕಾರ್ಯಪ್ಪ, ಮನೋಹರ್ ಚೌಧರಿ ಹಾಗೂ ಅಸೋಸಿಯೇಟ್ಸ್ ನ ಚೀಫ್ ಸ್ಟ್ರಾಟಜಿಕ್ ಪಾರ್ಟ್ನರ್ ಸಚಿನ್ ಕುಮಾರ್ ಬಿ.ಪಿ ಉಪಸ್ಥಿತರಿದ್ದರು.