ಸಾಲದ ಸುಳಿಯಲ್ಲಿ ಸಿಲುಕಿರುವ ಬೀದರ್ ಡಿಸಿಸಿ ಬ್ಯಾಂಕ್ ದಿವಾಳಿಯತ್ತ: ಈಶ್ವರ ಖಂಡ್ರೆ

ಬೀದರ್, ನ.11 : ಸಾಲದ ಸುಳಿಯಲ್ಲಿ ಸಿಲುಕಿರುವ ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ದಿವಾಳಿಯ ಭೀತಿಯಲ್ಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ಬೀದರ್ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ಸುಮಾರು ರೂ.2200 ಕೋಟಿ ಠೇವಣಿ ಹೊಂದಿದ್ದರೂ 12 ಸಾವಿರ ಕೋಟಿ ರೂ. ವಿವಿಧ ಕೈಗಾರಿಕೆಗಳಿಗೆ ಸಾಲ ನೀಡಿದ್ದು ಮರು ಪಾವತಿಯಾಗದೆ ಮುಳುಗುವ ಹಂತದಲ್ಲಿದೆ. ಡಿಸಿಸಿ ಬ್ಯಾಂಕ್ ಈಗಾಗಲೇ ಬಿಎಸ್‍ಎಸ್‍ಕೆ ಕಾರ್ಖಾನೆಗೆ 165 ಕೋಟಿ ರೂ. ಎಂಜಿಎಸ್‍ಎಸ್‍ಕೆ ಕಾರ್ಖಾನೆಗೆ 289 ಕೋಟಿ ರೂ. ಹಾಗೂ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗೆ 660 ಕೋಟಿ ರೂ. ಸಾಲ ನೀಡಿದ್ದು ಮರುಪಾವತಿ ಆಗಲು ಬಾಕಿಯಿದೆ ಎಂದು ಹೇಳಿದರು.

ಕಾರ್ಖಾನೆಗಳಿಗೆ ಸಾವಿರಾರು ಕೋಟಿ ರೂ. ಸಾಲ ನೀಡಿ ಎನ್‍ಪಿಎ ಎದುರಿಸುತ್ತಿರುವ ಡಿಸಿಸಿ ಬ್ಯಾಂಕ್‍ನಲ್ಲಿ ರೈತರು, ಉದ್ಯಮಿಗಳ ಠೇವಣಿ ಇದೆ. ಅದರ ಸ್ಥಿತಿ ಏನು ಎಂದ ಅವರು, ಈ ಎಲ್ಲಾ ಕಾರ್ಖಾನೆಗಳು, ಇಷ್ಟೊಂದು ಸಾಲ ನೀಡಿರುವ ಬ್ಯಾಂಕಿನ ಅಧಿಕಾರಿಗಳ ಲೋಪದ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಈ ಕಾರ್ಖಾನೆಗಳು ಇಷ್ಟೊಂದು ಪ್ರಮಾಣದ ಸಾಲವನ್ನು ಮರು ಪಾವತಿಸುತ್ತವೆಯೇ ಎಂದು ಪ್ರಶ್ನಿಸಿದ ಅವರು, ಈಗಾಗಲೇ ಬಿಎಸ್‍ಎಸ್ ಕಾರ್ಖಾನೆ ಸಂಪೂರ್ಣ ಮುಚ್ಚಿ ಹೋಗಿದೆ. ಇನ್ನು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗೆ ನೀಡಿರುವ ಭಾರೀ ಪ್ರಮಾಣದ ಸಾಲ ಮರು ಪಾವತಿಯ ಬಗ್ಗೆ ಆತಂಕವಿದೆ. ಇದು ಕೇವಲ ಡಿಸಿಸಿ ಬ್ಯಾಂಕ್‍ನಿಂದ ಪಡೆದ ಸಾಲ. ಇತರೇ ರಾಷ್ಟ್ರೀಕೃತ ಬ್ಯಾಂಕ್‍ಗಳು ಮತ್ತು ಅಪೆಕ್ಸ್ ಸೇರಿದಂತೆ ಇತರೆಡೆಯಿಂದ ಪಡೆದ ಸಾಲದ ಹೊರೆ ಅತ್ಯಂತ ಆತಂಕ ಸೃಷ್ಟಿಸುತ್ತವೆ ಎಂದರು.

ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 500 ಜನ ಕಾರ್ಮಿಕರ ಸುಮಾರು ರೂ.60 ಕೋಟಿ ಸಂಬಳ, ಪಿಎಫ್, ಇಎಸ್‍ಐ ಭರಿಸಿಲ್ಲ, ಅದಾಗ್ಯೂ ಕಾರ್ಖಾನೆಗೆ ಕಬ್ಬು ಸಾಗಿಸಿದ ರೈತರ ಸಕ್ಕರೆ ಹಣವನ್ನು ಲೂಟಿ ಹೊಡೆಯಲಾಗಿದೆ. ಬಿಎಸ್‍ಎಸ್ ಕಾರ್ಖಾನೆಯಲ್ಲಿ ರೂ. 9.81 ಅಕ್ರಮ ಆಗಿರುವುದು ಸಾಬೀತಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದರೂ ಈ ಬಗ್ಗೆ ಯಾವುದೇ ಕ್ರಮವಾಗಿಲ್ಲ ಎಂದರು.

ಈ ಬಗ್ಗೆ ಶಾಸಕ ರಾಜಶೇಖರ ಪಾಟೀಲ್ ಅವರು ಮಾತನಾಡಿ, ಒಂದು ಹೊಸ ಕಾರ್ಖಾನೆ ನಿರ್ಮಾಣಕ್ಕೆ ಗರಿಷ್ಠ ಅಂದರೂ 300-400 ಕೋಟಿ ರೂ. ವೆಚ್ಚವಾಗುತ್ತದೆ. ಆದರೆ, ಇಲ್ಲಿ 300 ರಿಂದ 700 ಕೋಟಿ ರೂ. ವರೆಗೆ ಚಾಲ್ತಿಯಲ್ಲಿರುವ ಹಳೆಯ ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡಿದ್ದು ಹೇಗೆ ಮತ್ತು ಮರುಪಾವತಿಯ ಯಾವ ಗ್ಯಾರಂಟಿ ಮೇಲೆ ಎಂದು ಪ್ರಶ್ನಿಸಿದರು.

ಕಾರ್ಖಾನೆ ಪುನಶ್ಚತನಕ್ಕೆ ಕ್ರಮ ವಹಿಸುವುದಾಗಿ ಈ ಹಿಂದೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ ಭರವಸೆ ನೀಡಿ ಹೋಗಿದ್ದು ಮರೆತುಹೋಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಎರಡೂ ಕಡೆಗಳಲ್ಲಿರುವ ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಈ ವರ್ಷವಾದರೂ ಕಾರ್ಖಾನೆ ಆರಂಭಿಸುತ್ತದೆಯೇ ಎಂದು ಪ್ರಶ್ನಿಸಿದರು.

ನನ್ನ ಹಾಗೂ ನನ್ನ ಸಹೋದರರ ಹೆಸರನ್ನು ಅಕ್ರಮದ ಆರೋಪದ ಸಾಲಿನಲ್ಲಿ ಬಿಜೆಪಿಯವರು ತಮ್ಮಭಾಷಣದಲ್ಲಿ ಸೇರಿಸುತ್ತಿದ್ದಾರೆ. ಇದು ತಪ್ಪು, ಸರ್ಕಾರ ತಕ್ಷಣವೇ ನಿವೃತ್ತ ನ್ಯಾಯಾಧೀಶರ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿತರಿಗೆ ಗಲ್ಲು ಶಿಕ್ಷೆ ವಿಧಿಸಿದರೂ ಸೈ ಎಂದು ರಾಜಶೇಖರ ಪಾಟೀಲ್ ಗರಂ ಆದರು.

ಈ ಕುರಿತು ಪ್ರತಿಕ್ರಿಯಿಸಿದ ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು, ಬಿಎಸ್‍ಎಸ್‍ಕೆ ಸಕ್ಕರೆ ಕಾರ್ಖಾನೆ ಪುನಶ್ಚತನ ಕುರಿತಂತೆ ಕಾರ್ಖಾನೆ ಆಡಳಿತ ಮಂಡಳಿ ನೀಡಿರುವ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲಿ ಕ್ರಮ ವಹಿಸಲಾಗುತ್ತದೆ. ಆದರೆ, ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆ ಆರಂಭಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪೂರೆ, ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಎಸ್‍ಪಿ ಡೆಕ್ಕ ಕಿಶೋರ ಬಾಬು, ಜಿಪಂ ಸಿಇಒ ಇದ್ದರು.

Leave a Reply

Your email address will not be published.

error: Content is protected !!