ಇನ್‌ಸ್ಪೆಕ್ಟರ್‌ ಹುದ್ದೆಗೆ 70 ಲಕ್ಷ ರೂ. ಕೊಟ್ಟು ಬಂದರೆ ಹೃದಯಾಘಾತವಾಗದೆ ಇನ್ನೇನಾಗುತ್ತದೆ: ಎಂಟಿಬಿ ಹೇಳಿಕೆ ಎಚ್’ಡಿಕೆ ಕಿಡಿ!

ಬೆಂಗಳೂರು: ಅಮಾನತುಗೊಂಡಿದ್ದ ಪೊಲೀಸ್ ಇನ್ಪೆಕ್ಟರ್ ನಂದೀಶ್ ಸಾವು, ಹೃದಯಾಘಾತದಿಂದ ಅಲ್ಲ ಬದಲಾಗಿ ಇದೊಂದು ಕೊಲೆ ಎಂದು ಮಾಜಿ‌ ಸಿಎಂ ಎಚ್ ಡಿ ಕುಮಾರಸ್ವಾಮಿ‌ ಆರೋಪಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ‘ಈಗ ಸರ್ಕಾರವೇ ಸತ್ಯ ಹೇಳಿದೆ! ಸದ್ಯ, ಸಾವಿನಲ್ಲೂ ಸತ್ಯ ಹೇಳುವ ಧೈರ್ಯವನ್ನು ಸರ್ಕಾರ ಮಾಡಿದೆ. ಬೊಮ್ಮಾಯಿ ಸಂಪುಟದ ಸಚಿವರೇ ವಿಷಯ ಬಹಿರಂಗಪಡಿಸಿದ್ದಾರೆ. ಸಚಿವ ಎಂ.ಟಿ.ಬಿ. ನಾಗರಾಜ್ ಅವರ ಹೇಳಿಕೆಯು ಈ ಸರ್ಕಾರದ ಕಾಸಿಗಾಗಿ ಪೋಸ್ಟಿಂಗ್ ದಂಧೆಗೆ ಹಿಡಿದ ಕನ್ನಡಿ’ ಎಂದು ಪ್ರತಿಕ್ರಿಯಿಸಿದ್ದಾರೆ.

ಸಚಿವರೇ ಹೇಳಿದಂತೆ 70-80 ಲಕ್ಷಗಳನ್ನು ನಂದೀಶ್ ಅವರು ಯಾರಿಗೆ ಕೊಟ್ಟರು? ಇದರಲ್ಲಿ ಅವರ ಮೇಲಿನ ಉನ್ನತ ಅಧಿಕಾರಿಗಳು, ಗೃಹ ಸಚಿವರು ಮತ್ತು ಮುಖ್ಯಮಂತ್ರಿಗೆ ಪರ್ಸಂಟೇಜ್ ಹೋಗಿದೆಯಾ? ಅಥವಾ ಕಾಣದ ರಿಮೋಟ್ ಯಾವುದಾದರೂ ಇದೆಯಾ? ಸಚಿವರಂತೆ ನೀವೂ ಸತ್ಯ ಹೇಳಿ ಸಿ.ಎಂ. ಸಾಹೇಬರೇ’ ಎಂದು ಟ್ವೀಟ್‌ ಮಾಡಿದ್ದಾರೆ.

‘ಸಂಘ ಸಂಸ್ಕಾರದ ಗೃಹ ಸಚಿವರು ಉತ್ತರ ನೀಡಲೇಬೇಕು. ಧಮ್ಮಿದ್ರೆ, ತಾಕತ್ತಿದ್ರೆ ಎನ್ನುವ ಮುಖ್ಯಮಂತ್ರಿ ಅವರು ಈ ಬಗ್ಗೆ ಮೌನ ಮುರಿಯುವ ತಾಕತ್ತು ತೋರಬೇಕು’ ಎಂದು ಹೇಳಿದ್ದಾರೆ. ಅಮಾನತುಗೊಂಡಿದ್ದ ಕೆ.ಆರ್.ಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಎಚ್‌.ಎಲ್‌. ನಂದೀಶ್ ಹೃದಯಾಘಾತದಿಂದ ಗುರುವಾರ ಮೃತಪಟ್ಟ ಸಂದರ್ಭದಲ್ಲಿ ಅಂತಿಮ ದರ್ಶನ ಪಡೆಯಲು ಬಂದ ಸಚಿವ ಎಂ.ಟಿ.ಬಿ. ನಾಗರಾಜ್, ಬೆಂಗಳೂರು ಪೊಲೀಸ್ ಕಮಿಷನರ್‌ ಪ್ರತಾಪ್ ರೆಡ್ಡಿ ಅವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದರು. ನಂದೀಶ್ ಅವರನ್ನು ಪಬ್‌ ವಿಚಾರದಲ್ಲಿ ಅಮಾನತುಗೊಳಿಸಿದ್ದಕ್ಕಾಗಿ ಕಿಡಿಕಾರಿದ್ದರು.

ತಪ್ಪು ನಡೆದಿದ್ದರೆ ಪೊಲೀಸ್‌ ಕಮಿಷನರ್‌ ನೋಟಿಸ್‌ ನೀಡಬಹುದಿತ್ತು. ಸಣ್ಣ ವಿಷಯಕ್ಕೆ ಅಮಾನತು ಗೊಳಿಸಲಾಗಿತ್ತು. ಕಮಿಷನರ್ ಅವರು ದೊಡ್ಡ ಅಪರಾಧ ಮಾಡಿದವರನ್ನೇ ಏನೂ ಮಾಡಿಲ್ಲ. ಲೂಟಿ ಮಾಡುವವರು ಮಾಡುತ್ತಿದ್ದಾರೆ. ಈ ಇನ್‌ಸ್ಪೆಕ್ಟರ್‌ಗೆ ಒಂದು ಅವಕಾಶ ಕೊಡಬೇಕಾಗಿತ್ತು. ಎಚ್ಚರಿಕೆ ನೀಡಬೇಕಾ ಗಿತ್ತು’ ಎಂದು ಸಚಿವ ನಾಗರಾಜ್‌ ಹೇಳಿದ್ದರು.

ಪ್ರಕರಣದ ಹಿನ್ನಲೆ: ‌ಕೆ.ಆರ್. ಪುರ ಠಾಣೆ ವ್ಯಾಪ್ತಿಯಲ್ಲಿದ್ದ ಟಾನಿಕ್ ಬಾರ್‌ ಆ್ಯಂಡ್ ರೆಸ್ಟೋರೆಂಟ್ ತಡರಾತ್ರಿ ಎರಡು ಗಂಟೆಯವರೆಗೂ ತೆರೆದಿತ್ತು. ಸಿಸಿಬಿ ಅಧಿಕಾರಿಗಳು ದಾಳಿ ಮಾಡಿ, ಮಾಲೀಕರು ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅವಧಿ ಮೀರಿ ವಹಿವಾಟು ನಡೆಸುತ್ತಿದ್ದರೂ ಬಾರ್ ಆ್ಯಂಡ್ ರೆಸ್ಟೋರೆಂಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೇ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಇನ್‌ಸ್ಪೆಕ್ಟರ್‌ ನಂದೀಶ್ ಅವರನ್ನು ಅಮಾನತುಗೊಳಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!