ಕರಗಕ್ಕೆ-ವೀರಗಾಸೆ ನೃತ್ಯಕ್ಕೆ ಅಪಮಾನ ಆರೋಪಕ್ಕೆ ಸಚಿವ ಸುನಿಲ್ ಟ್ವೀಟ್’ಗೆ ವ್ಯಾಪಕ ಆಕ್ರೋಶ

ಬೆಂಗಳೂರು ಅ.27: ಇತ್ತೀಚಿಗೆ ಬಿಡುಗಡೆಗೊಂಡ ಡಾಲಿ ಧನಂಜಯ್‌ ನಟಿಸಿ ನಿರ್ಮಿಸಿರುವ ಹೆಡ್‌ ಬುಶ್‌ ಚಿತ್ರದಲ್ಲಿ ಬೆಂಗಳೂರು ಕರಗಕ್ಕೆ ಮತ್ತು ವೀರಗಾಸೆ ನೃತ್ಯಕ್ಕೆ ಅಪಮಾನ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅವರು ಮಾಡಿರುವ ಟ್ವೀಟ್ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಸಚಿವರ ಟ್ವೀಟ್ ಗೆ ವಿರೋಧ ವ್ಯಕ್ತಪಡಿಸಿರುವ ಟ್ವೀಟ್ ಬಳಕೆದಾರರು ‘ಎಲ್ಲ ವಿಚಾರಕ್ಕೂ ರಾಜಕೀಯ ತರಬೇಡಿ. ಈ ಟ್ವೀಟ್ ನ್ನು ಯಾರನ್ನು ಖುಷಿಪಡಿಸಲು?’ಎಂದು ಪ್ರಶ್ನೆ ಮಾಡಿದ್ದಾರೆ. ”ನಿಮ್ಮ ರಾಜಕಾರಣವನ್ನು ರಾಜಕಾರಣ ಸಂಘಟನೆಗಳನ್ನು ಚಿತ್ರೋದ್ಯಮದಿಂದ ದೂರವಿಟ್ಟರೆ ಚಿತ್ರೋದ್ಯಮಕ್ಕೆ ಒಳಿತು ಇಲ್ಲದಿದ್ದರೆ ದಶಕದ ನಂತರ ಮತ್ತೆ ವಾಪಸ್ ಬಂದಿರುವ ಕನ್ನಡ ಚಿತ್ರರಂಗ ಇಂತಹ ಸಂಘಟನೆಗಳಿಂದ ಮತ್ತೆ ಬೆಳೆಯುವ ಪೈರು ಮೊಳಕೆಯಲ್ಲೆ ಅನ್ನೋತರ ಆಗುತ್ತೆ, ಸಿನಿಮಾನ ಸಿನೆಮಾ ತರ ನೋಡಿದರೆ ಒಳಿತು ಅದಕ್ಕೆ ರಾಜಕಾರಣದ ಸೊಪ್ಪನ್ನು ಮೆತ್ತಬೇಡಿ” ಎಂದು ದಿನಕರನ್ ಎಂಬವರು ಟ್ವೀಟ್ ಮಾಡಿದ್ದಾರೆ. 

‘ವೀರಗಾಸೆ ಕುಣಿತ ಕಲಾವಿದರಿಗೆ ಪಿಂಚಣಿ ಯೋಜನೆ ಜಾರಿ ಮಾಡಿ. ಅವರಿಗೂ ಗೌರವ ಧನ ಕೊಡಿ. ಕನ್ನಡದ ಕಲೆಗಳನ್ನು ಉಳಿಸಿ’ ಎಂದು ಗೋವಿಂದ್ ಜಿ. ಎಸ್ ಎಂಬವರು ಸಚಿವರನ್ನು ಒತ್ತಾಯಿಸಿದ್ದಾರೆ. ಸಿನಿಮಾದ ಕುರಿತು ಬಲಪಂಥೀಯರು ಹಾಗೂ ಹಿಂದುತ್ವ ಸಂಘಟನೆಗಳು ವಿವಾದವೆಬ್ಬಿಸಿದ್ದು, ಚಿತ್ರದಲ್ಲಿ ವೀರಗಾಸೆ ನೃತ್ಯಗಾರನಿಗೆ ಹೊಡೆಯುವ ದೃಶ್ಯವಿದೆ ಮತ್ತು ಬೆಂಗಳೂರು ಕರಗಕ್ಕೆ ಅವಮಾನವಾಗುವಂತೆ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿ, ಚಿತ್ರ ತಂಡದ ವಿರುದ್ಧ ಪೊಲೀಸ್ ದೂರು ಕೂಡ ಸಲ್ಲಿಸಿದ್ದಾರೆ. ಆದರೆ ಈ ಆರೋಪಗಳನ್ನು ಚಿತ್ರತಂಡ ಅಲ್ಲಗಳೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಹೆಡ್‌ ಬುಶ್‌ ಚಿತ್ರದಲ್ಲಿ ಬೆಂಗಳೂರು ಕರಗಕ್ಕೆ ಮತ್ತು ವೀರಗಾಸೆ ನೃತ್ಯಕ್ಕೆ ಅಪಮಾನ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ  ಟ್ವೀಟ್ ಮಾಡಿರುವ ಸಚಿವರು, ‘ವೀರಗಾಸೆ ಕನ್ನಡದ ಹೆಮ್ಮೆಯ ಜಾನಪದ ಪರಂಪರೆ. ಚಲನಚಿತ್ರವೂ ಸೇರಿದಂತೆ ಯಾವುದೇ ಮನೋರಂಜನಾ ಮಾಧ್ಯಮದಿಂದ ಜಾನಪದ ಸಂಸ್ಕೃತಿಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಒಂದೊಮ್ಮೆ ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನವಾದರೆ ನಿರ್ಮಾಪಕರು ಹಾಗೂ ನಿರ್ದೇಶಕರು ಮರು ಚಿಂತನೆ ನಡೆಸುವುದು ಸೂಕ್ತ” ಎಂದು ತಿಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!