ಶಿರ್ವ: ಶ್ರಮದಾನದಿಂದ ಹೊಂಡಗುಂಡಿ ರಸ್ತೆಯ ದುರಸ್ತಿಗೊಳಿಸಿದ ಗ್ರಾಮೀಣ ಕಾಂಗ್ರೆಸ್
ಉಡುಪಿ ಸೆ.20 (ಉಡುಪಿ ಟೈಮ್ಸ್ ವರದಿ): ಹೊಂಡ ಗುಂಡಿಗಳಿಂದ ಕೂಡಿರುವ ಕಟಪಾಡಿ ಶಿರ್ವ ಮುಖ್ಯರಸ್ತೆಯ ಬಗ್ಗೆ ಸಂಬಂಧ ಪಟ್ಟ ಇಲಾಖೆ ಕೂಡಲೇ ಗಮನಹರಿಸಿ ರಸ್ತೆ ಡಾಮರೀಕರಣ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಎಂದು ಶಿರ್ವ ಗ್ರಾಮೀಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೆಲ್ವಿನ್ ಡಿಸೋಜಾ ಆಗ್ರಹಿಸಿದ್ದಾರೆ.
ಇಂದು ಶಿರ್ವ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಇಂದು ಕಟಪಾಡಿ ಶಿರ್ವ ಮುಖ್ಯರಸ್ತೆ ಯಲ್ಲಿರುವ ಗುಂಡಿಗಳನ್ನು ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಿಂದ ಶಿರ್ವ ಗುರುಂಜವರೆಗೆ ಮುಚ್ಚಲಾಯಿತು.
ಈ ವೇಳೆ ರಸ್ತೆ ಅವ್ಯವಸ್ಥೆ ಬಗ್ಗೆ ಮಾತನಾಡಿದ ಅವರು, ಈ ರಸ್ತೆಯು ಪಿಡ್ಲ್ಯೂಡಿ ರಸ್ತೆಯಾಗಿದ್ದು, ಇವರ ನಿರ್ಲಕ್ಷ್ಯದಿಂದ ಸಂಪೂರ್ಣ ಗುಂಡಿಮಯವಾಗಿದೆ. ಈ ಬಗ್ಗೆ ಅನೇಕರು ಈಗಾಗಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಸಾರ್ವಜನಿಕರಿಗೆ ಸಂಚಾರಕ್ಕೆ ಅನುಕೂಲವಾಗ ಬೇಕು ಎಂಬ ಉದ್ದೇಶದಿಂದ ಇಂದು ಶಿರ್ವ ಗ್ರಾಮೀಣ ಕಾಂಗ್ರೆಸ್ ವತಿಯಿಂದ ತಾತ್ಕಾಲಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಆದರೆ ಪಿಡಬ್ಲ್ಯೂಡಿ ಇಲಾಖೆಯವರು ಕೂಡಲೇ ಈ ರಸ್ತೆಯನ್ನು ಡಾಮರೀಕರಣ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಶಾಸಕರು ಕೂಡಾ ಈ ಬಗ್ಗೆ ಕೂಡಲೇ ಎಚ್ಚತ್ತುಕೊಳ್ಳಬೇಕು ಎಂದರು.
ವಿನಯ್ ಕುಮಾರ್ ಸೊರಕೆ ಅವರು ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಈ ರಸ್ತೆ ಡಾಮರೀಕರಣ ಮಾಡಿದ್ದು ಆ ನಂತರ ನಾಲ್ಕು ವರ್ಷಗಳಲ್ಲಿ ರಸ್ತೆ ಅಭಿವೃದ್ಧಿ ಕಾಣದೆ ಸಂಪೂರ್ಣ ಹಾಳಾಗಿದೆ ಈಗಿನ ಶಾಸಕರ ನಿರ್ಲಕ್ಷ್ಯ ಇದರಲ್ಲಿ ಎದ್ದು ತೋರುತ್ತದೆ. ಜಿಲ್ಲೆಯಲ್ಲಿ ಅವರದ್ದೇ ಪಕ್ಷದ ಸಂಸದರು, ಸಚಿವರು ಶಾಸಕರು ಇದ್ದಾರೆ. ಉಸ್ತುವಾರಿ ಸಚಿವರೂ ಇದ್ದಾರೆ ಹೀಗಿದ್ದರೂ ಮುಖ್ಯ ರಸ್ತೆಯನ್ನು ದುರಸ್ತಿ ಮಾಡಲು ಆಗದೇ ಇರುವುದು ಇವರ ಆಡಳಿತಕ್ಕೆ ಹಿಡಿದ ಕೈಗನ್ನಡಿ ಯಂತಾಗಿದೆ. ಪ್ರಯಾಣಿಕರು ಪ್ರತಿನಿತ್ಯ ಸರಕಾರವನ್ನು ಬೈಯುವಂತಾಗಿದೆ ಎಂದು ಟೀಕಿಸಿದರು.
ಹಾಗೂ ಇದೇ ವೇಳೆ ಸರಕಾರ ಮತ್ತು ಇಲಾಖೆಯವರು ಕೂಡಲೇ ಈ ರಸ್ತೆ ಬಗ್ಗೆ ಗಮನ ಹರಿಸಿ ರಸ್ತೆಯನ್ನು ಕೂಡಲೇ ಡಾಮರೀಕರಣ ಮಾಡಿ ಜನರಿಗೆ ಅಗತ್ಯ ವಿರುವ ಸಮಸ್ಯೆಗೆ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪಂಚಾಯತ್ ಅಧ್ಯಕ್ಷರಾದ ರತನ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿಲ್ಸನ್ ರೊಡ್ರಿಗಸ್, ಶಿರ್ವ ಗ್ರಾಮೀಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೆಲ್ವಿನ್ ಡಿಸೋಜ, ಉಪಾಧ್ಯಕ್ಷ್ಯೆ ಗ್ರೇಸಿ ಕರ್ಡೋಜಾ, ಮಾಜಿ ಅಧ್ಯಕ್ಷರಾದ ಹಸನಬ್ಬ ಶೇಖ್, ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಬಂಟಕಲ್ಲು , ಜೆಸಿಂತಾ ಡಿಸೋಜ, ಲ್ಯಾನ್ಸಿ ಕೋಡ೯, ಆಲ್ವಿನ್ ಬಂಟಕಲ್ಲು, ದಿನೇಶ್ ಬಂಟಕಲ್ಲು ಉಪಸ್ಥಿತರಿದ್ದರು.