ವಕ್ಫ್ ಬೋರ್ಡ್ ಅವ್ಯವಹಾರ ವರದಿ ಸುಳ್ಳು ಎಂದಾದರೆ ನನ್ನ ತಲೆ ಕಡಿದು ಇಡುತ್ತೇನೆ- ಬಿಜೆಪಿ ನಾಯಕ ಅನ್ವರ್ ಮಣಪ್ಪಾಡಿ ಸವಾಲು

ಮಂಗಳೂರು ಸೆ.20: ವಕ್ಫ್ ಬೋರ್ಡ್ ಅವ್ಯವಹಾರ ಕುರಿತ ವರದಿ ಸುಳ್ಳು ಎಂದಾದರೆ ನನ್ನ ತಲೆ ಕಡಿದು ಇಡುತ್ತೇನೆ ಎಂದು ಬಿಜೆಪಿ ನಾಯಕ ಅನ್ವರ್ ಮಣಪ್ಪಾಡಿ ಸವಾಲು ಹಾಕಿದ್ದಾರೆ.

ಈ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಕ್ಫ್ ಮಂಡಳಿಗೆ ಸಂಬಂಧಿಸಿ 2.30 ಸಾವಿರ ಕೋಟಿ ಮೊತ್ತದ ಅವ್ಯವಹಾರ ನಡೆದಿದೆ. ಈ ವರದಿಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ನ್ಯಾಯ ಸಿಗಲಿಲ್ಲ. ಯಡಿಯೂರಪ್ಪ ಮತ್ತು ಅವರ ಮಗ ವರದಿಯನ್ನು ಮಾರಿಕೊಂಡಿದ್ದರು ಎಂದು ಆರೋಪಿಸಿದ್ದಾರೆ.

ಈ ಅವ್ಯವಹಾರದ ಕುರಿತು ಸತ್ಯ ಹೊರಗೆಳೆಯಲು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಈಗ ಸದವಕಾಶವಿದೆ, ಬೊಮ್ಮಾಯಿಯವರೇ ಧೈರ್ಯವಾಗಿ ಮುಂದೆ ಹೋಗಿ ಎಂದ ಅವರು, ಬೆಂಗಳೂರಿನ ಬೆಲ್ಲಳ್ಳಿ ಸರ್ವೇ ನಂಬರ್ 55ರ 602 ಎಕರೆ, ಜಾಫರ್ ಷರೀಫ್ ಎಂಜಿನಿಯರಿಂಗ್ ಕಾಲೇಜು, ಪಂಚತಾರ ಹೋಟೇಲ್, ವಿಂಡ್ಸರ್ ಮ್ಯಾನರ್ ಕೂಡ ವಕ್ಫ್ ಆಸ್ತಿ. ಈ ಹಗರಣದಲ್ಲಿ ಸಿ.ಎಂ.ಇಬ್ರಾಹಿಮ್, ಹ್ಯಾರಿಸ್, ಕಮರುಲ್ಲಾ ಇಸ್ಲಾಂ, ಮಲ್ಲಿಕಾರ್ಜುನ ಖರ್ಗೆ, ಇಕ್ಬಾಲ್ ಅನ್ಸಾರಿ, ಜಾಫರ್ ಷರೀಫ್, ರೆಹಮಾನ್ ಖಾನ್, ಧರಂಸಿಂಗ್, ಸೂರ್ಯವಂಶಿ, ರೋಷನ್ ಬೇಗ್ ಸೇರಿದಂತೆ ಅಂದಿನ ಎಲ್ಲಾ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ.

ವರದಿಯ ಪರವಾಗಿ ಹೈಕೋರ್ಟ್, ಸುಪ್ರಿಂಕೋರ್ಟ್ ವರೆಗೂ ಹೋಗಿ ಗೆದ್ದಿದ್ದೇನೆ. ಇನ್ನು ದೇವರ ಹತ್ತಿರ ಹೋದ ಮೇಲೆ ಕ್ರಮ ಕೈಗೊಳ್ತೀರಾ ಎಂದು ಪ್ರಶ್ನಿಸಿದರು. ಹಾಗೂ ಸಿದ್ದರಾಮಯ್ಯ ಅವರು ಇಂದು ಸುಳ್ಳು ಕತೆ ಇರಿಸಿಕೊಂಡು ಸದನಕ್ಕೆ ಬಂದಿದ್ದಾರೆ. ಆ ಸುಳ್ಳು ಕಂತೆಯ ಬಲೆಗೆ ನೀವು ಬೀಳಬೇಡಿ. ವಕ್ಫ್ ಆಸ್ತಿಯ ಮೇಲೆ ಹಲವು ಸಂಕೀರ್ಣಗಳು, ಪಂಚತಾರ ಹೊಟೆಲ್ ಗಳು, ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು ನಿರ್ಮಾಣವಾಗಿವೆ. ಈ ವರದಿಯು ಸುಳ್ಳು ಎಂದಾದರೆ ತಲೆ ಕಡಿದು ಇಡುತ್ತೇನೆ ಎಂದಿದ್ದಾರೆ.

ಇನ್ನು ವಕ್ಫ್ ಮಂಡಳಿಯಲ್ಲಿ ನಡೆಯುತ್ತಿರುವ ಅಕ್ರಮ ತಡೆಗಟ್ಟುವಲ್ಲಿ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹೆಚ್ಚುವರಿ ಮಹಾ ನಿರ್ದೇಶಕ, ಐಎಎಸ್ ಅಧಿಕಾರಿ ಮಹೇಂದ್ರ ಜೈನ್ ಅವರಿಗೆ ಅನ್ವರ್ ಮಾಣಿಪ್ಪಾಡಿ ಡಿಸೆಂಬರ್ 4, 2020ರಂದು ಬಹಿರಂಗ ಪತ್ರ ಬರೆದಿದ್ದರು. ತಮ್ಮ ಪತ್ರದಲ್ಲಿ ಅವರು ಅಕ್ರಮದ ಹಲವು ವಿವರಗಳನ್ನು ನೀಡಿದ್ದರು. ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಕಂಬಲ್ ಪೆÇೀಶ್ ದರ್ಗಾಕ್ಕೆ ನಿವೃತ್ತ ಕೆಎಎಸ್ ಅಧಿಕಾರಿ ಆತೀಕ್ ಅಹ್ಮದ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿತ್ತು. ಆದರೆ, ಅವರಿಗೆ ಅಧಿಕಾರ ಹಸ್ತಾಂತರಿಸಲು 8 ವರ್ಷಗಳಿಂದ ಅಧಿಕಾರದಲ್ಲಿದ್ದ ಅಧಿಕಾರಿ ಸತಾಯಿಸಿದ್ದರು ಎಂದು ದೂರಿದ್ದರು.

ಹಾಗೂ ಅಧಿಕಾರಕ್ಕೆ ಬಂದ ಐದೇ ತಿಂಗಳಲ್ಲಿ ಆತೀಕ್ ಅಹ್ಮದ್ ತಮ್ಮ ಸಾಮಥ್ರ್ಯವನ್ನು ತೋರಿದ್ದಾರೆ. ಮೊದಲಿದ್ದ ಸಮಿತಿ 12 ವರ್ಷದಲ್ಲಿ 26 ಲಕ್ಷ ಮೊತ್ತವನ್ನು ಮಾತ್ರ ಸಂಗ್ರಹಿಸಿತ್ತು. ಆದರೆ ಆತೀಕ್ ಅಹ್ಮದ್ ಕೇವಲ 5 ತಿಂಗಳಲ್ಲಿ 35 ಲಕ್ಷ ಸಂಗ್ರಹಿಸಿದ್ದಾರೆ. ಹಾಗಾದರೆ ಮೊದಲು ಎಷ್ಟು ಅವ್ಯವಹಾರ ನಡೆದಿತ್ತು ಎಂದು ಅನ್ವರ್ ಪ್ರಶ್ನಿಸಿದ್ದರು.

ಅಹ್ಮದ್ ಬಂದ ನಂತರ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಇದು ಮೊದಲಿದ್ದವರಿಗೆ ಏಕೆ ಸಾಧ್ಯವಾಗಲಿಲ್ಲ ಇದು ವಕ್ಫ್ ಇಲಾಖೆಯ ಅವ್ಯವಹಾರಕ್ಕೆ ಒಂದು ಉದಾಹರಣೆಯಷ್ಟೇ. ಇದೇ ರೀತಿ ಕೋಲಾರದ ಚಿಂತಾಮಣಿಯ ಮುರುಗಮಲ್ಲಾ ದರ್ಗಾದಲ್ಲೂ ಅವ್ಯವಹಾರ ನಡೆಯುತ್ತಿದೆ. ಇವೆಲ್ಲವನ್ನೂ ಮಟ್ಟ ಹಾಕಬೇಕು. ದರ್ಗಾಗಳಲ್ಲಿ 8-10 ವರ್ಷಗಳಿಂದ ದುಡಿಯುತ್ತಿರುವವರಿಗೆ ಮೂರು ಕಾಸಿನ ಸಂಬಳ ನೀಡಲಾಗುತ್ತಿದೆ. ಬಂದ ಆದಾಯವೆಲ್ಲವೂ ಯಾರದ್ದೋ ಪಾಲಾಗುತ್ತಿದೆ ಎಂದು ಆರೋಪಿಸಿದ್ದರು. ಇದರ ಜೊತೆಗೆ ಇನ್ನಾದರೂ ಸರ್ಕಾರ ವಕ್ಫ್ ಇಲಾಖೆಯ ಭ್ರಷ್ಟ ಚಟುವಟಿಕೆಗಳಿಗೆ ಇತಿಶ್ರೀ ಹಾಡಬೇಕು. ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸುವ ಮೂಲಕ ಪಾರದರ್ಶಕ ಆಡಳಿತ ಆಗುವಂತೆ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!