ಭಾರತೀಯ ವಾಯುಪಡೆಯ ಹೆಲಿಕಾಪ್ಟರ್’ಗೆ ಮೊದಲ ಬಾರಿಗೆ ಮಹಿಳಾ ಯುದ್ಧ ಪೈಲೆಟ್’ಗಳ ನಿಯೋಜನೆ
ಹೊಸದಿಲ್ಲಿ ಸೆ.17: ಭಾರತೀಯ ವಾಯುಪಡೆಯ ಎರಡು ಮುಂಚೂಣಿ ಚಿನೂಕ್ ಹೆಲಿಕಾಪ್ಟರ್ಗಳಿಗೆ ಇದೇ ಮೊದಲ ಬಾರಿಗೆ ಮಹಿಳಾ ಯುದ್ಧ ಪೈಲೆಟ್ ಗಳನ್ನು ನಿಯೋಜಿಸಿದೆ.
ಸ್ಕ್ವಾರ್ಡನ್ ಲೀಡರ್ ಗಳಾದ ಪರೂಲ್ ಭಾರಧ್ವಾಜ್ ಮತ್ತು ಸ್ವಾತಿ ರಾಥೋಡ್ ಮಹಿಳಾ ಯುದ್ಧ ಪೈಲೆಟ್ ಗಳಾಗಿದ್ದಾರೆ. ಇವರು ಚಂಡೀಗಢ ಹಾಗೂ ಅಸ್ಸಾಂನ ಮೋಹನ್ ಬರಿಯಲ್ಲಿ ನೆಲೆ ನಿಂತಿರುವ ಸಿಎಚ್- 47ಎಫ್ ಚಿನೂಕ್ ಹೆಲಿಕಾಪ್ಟರ್ ಚಾಲನೆಗೆ ಮುನ್ನ ರಷ್ಯಾ ಮೂಲದ ಎಂಐ-17ವಿ5 ಹೆಲಿಕಾಪ್ಟರ್ ಗಳನ್ನು ಚಲಾಯಿಸುತ್ತಿದ್ದರು ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಚಿನೂಕ್ ಹೆಲಿಕಾಪ್ಟರ್ ಗಳನ್ನು ಚಲಾಯಿಸುವುದು ಎಐ-17 ಅಥವಾ ಇತರ ಹೆಲಿಕಾಪ್ಟರ್ ಗಳನ್ನು ಚಲಾಯಿಸುವುದಕ್ಕಿಂತ ಸಂಪೂರ್ಣ ಭಿನ್ನ. ಇದು ಟ್ಯಾಂಡಮ್ ರೂಟರ್ ವಿಮಾನವಾಗಿದ್ದು, ಹಲವು ಪಾತ್ರಗಳನ್ನು ನಿರ್ವಹಿಸಬಲ್ಲದು. ಇದು ವಿಶಿಷ್ಟ ಅನುಭವ ನೀಡುವ ಹೆಲಿಕಾಪ್ಟರ್ ಆಗಿದ್ದು, ನಿಯಂತ್ರಣಗಳು ಭಿನ್ನ. ಗಡಿಯ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ಪೈಲೆಟ್ ಗಳಿಗೆ ಇದು ಭಿನ್ನ ವಿಶಿಷ್ಟ ಅನುಭವ ನೀಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಹು ಕಾರ್ಯ ಸಾಮಥ್ರ್ಯದ ಚಿನೂಕ್ ಹೆಲಿಕಾಪ್ಟರ್ ಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗಿದ್ದು, ವಾಯುಪಡೆಯ ಸೇವೆಗೆ ನಿಯೋಜಿಸಿರುವ ಈ ಹೆಲಿಕಾಪ್ಟರ್ ಗಳ ವೆಚ್ಚ ಸುಮಾರು 650 ಕೋಟಿ ರೂ. 2019-20ರಲ್ಲಿ ನಿಯೋಜಿಸಿಕೊಂಡಿರುವ 15 ಚಿನೂಕ್ ಹೆವಿ ಲಿಫ್ಟ್ ಹೆಲಿಕಾಪ್ಟರ್ ಗಳು ಭಾರತೀಯ ಸೇನೆಯಲ್ಲಿವೆ. ಭಾರತ ಹಾಗೂ ಚೀನಾ ಸೇನೆ ನಡುವೆ ಸಂಘರ್ಷದ ವಾತಾವರಣವಿರುವ ಈ ಹಂತದಲ್ಲಿ ಉತ್ತರ ಹಾಗೂ ಪೂರ್ವ ಭಾಗಗಳಿಗೆ ಲಘು ಶಸ್ತ್ರಾಸ್ತ್ರಗಳ ಸಾಗಾಣಿಕೆ ಸೇರಿದಂತೆ ವಾಸ್ತವ ನಿಯಂತ್ರಣ ರೇಖೆ ಬಳಿ ಸೇನಾ ನಿಯೋಜನೆಗೆ ಬೆಂಬಲ ನೀಡುವಲ್ಲಿ ಈ ಹೆಲಿಕಾಪ್ಟರ್ ಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ವರದಿಯಾಗಿದೆ.