ಈಡಿಗ ಸಮಾಜದ ಮಠಕ್ಕೆ 10 ಎಕರೆ ಜಮೀನು- ಸಿಎಂ ಬೊಮ್ಮಾಯಿ ಭರವಸೆ
ಬೆಂಗಳೂರು ಸೆ.16: ಈಡಿಗ ಸಮಾಜದ ಮಠಕ್ಕೆ 10 ಎಕರೆ ಜಮೀನನ್ನು ಮಂಜೂರು ಮಾಡಿ ಶೀಘ್ರವಾಗಿ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.
ಬೆಂಗಳೂರಿನ ವೈಯಾಲಿಕಾವಲ್ ನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮುದಾಯ ಭವನಕ್ಕೆ ಎರಡು ಕಂತುಗಳಲ್ಲಿ 5 ಕೋಟಿ ರೂ ಒದಗಿಸಿ, 4 ನಾರಾಯಣ ಗುರುಗಳ ವಸತಿ ಶಾಲೆಗೆ 30 ರಿಂದ 40 ಕೋಟಿ ರೂ. ಒದಗಿಸಲಾಗುವುದು. ಇದನ್ನು ಸಮಾಜದ ಬಡ ಮಕ್ಕಳಿಗೆ ನೀಡುವ ಕಾರ್ಯ ಇದೇ ವರ್ಷ ಆರಂಭವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಅವರು ಸರ್ವಕಾಲಿಕ ಸತ್ಯ ಮಾರ್ಗದಲ್ಲಿ ನಡೆಯುವವನೇ ದೇವ ಮಾನವ. ಅವರ ಬದುಕಿನ ಸಾವಿರಾರು ಹೆಜ್ಜೆಗಳಲ್ಲಿ ನಾವು ಎರಡು ಹೆಜ್ಜೆ ನಡೆದರೆ ನಮ್ಮ ಜೀವನ ಸಾರ್ಥಕ ಆಗುತ್ತದೆ. ಬದಲಾವಣೆ ಜಗದ ನಿಯಮ. ಆದರೆ ಬದಲಾವಣೆ ಆರಂಭದಲ್ಲಿಯೇ ಆಗುವುದಿಲ್ಲ. ಆಚಾರ ವಿಚಾರದಲ್ಲಿ ಬದಲಾವಣೆ ಸುಲಭವಾಗಿ ಆಗುವುದಿಲ್ಲ. ಅದಕ್ಕೆ ಗುರುವಿನ ಅವಶ್ಯಕತೆಯಿದೆ. ಗುರುವಿನ ಮಾರ್ಗದರ್ಶನ, ಸ್ಪೂರ್ತಿಯಿಂದ ನಾವು ನಮ್ಮ ಬದುಕಿನ ಗುರಿಯನ್ನು ಮುಟ್ಟಬಹುದಾಗಿದೆ. ನಮ್ಮ ದೇಶಕ್ಕೆ ಹಿಂದಿನಗಿಂತಲೂ ಈಗ ನಾರಾಯಣ ಗುರುಗಳ ಅವಶ್ಯಕತೆ ಹೆಚ್ಚಿದೆ. ಹಾಗೂ ಸಮಾಜದಲ್ಲಿ ಜಾಗೃತಿಯ ಜೊತೆಗೆ ಒಗ್ಗಟ್ಟು ಬಹಳ ಮುಖ್ಯ. ಬೇರೆ ಬೇರೆ 26 ಕಸುಬುಗಳಲ್ಲಿ ಕೆಲಸ ಮಾಡಿಕೊಂಡರು ಅವರನ್ನು ಒಗ್ಗೂಡಿಸಿದ್ದು ನಾರಾಯಣ ಗುರುಗಳು. ಇದನ್ನು ಕಾಪಾಡಿಕೊಂಡು ಹೋಗಬೇಕು. ಪ್ರಜಾಪ್ರಭುತ್ವದಲ್ಲಿ ಸಂಘಟಿತವಾದ ಧ್ವನಿಗೆ ಬಹಳ ಬೆಲೆಯಿದೆ. ಈ ವ್ಯವಸ್ಥೆಯಲ್ಲಿ ನಮ್ಮ ಬದುಕು, ನಮ್ಮ ಮಕ್ಕಳ ಭವಿಷ್ಯ ಚೆನ್ನಾಗಿ ಆಗಬೇಕಾದರೆ, ಈ ಸಮಾಜ ಸಂಘಟಿತವಾಗಿ ಎದ್ದು ನಿಲ್ಲಬೇಕು ಎಂದು ಕರೆ ನೀಡಿದರು.
ನಾರಾಯಣ ಗುರುಗಳ ವಿಚಾರಧಾರೆ ಸರ್ವ ಕಾಲಕ್ಕೂ ಅವಶ್ಯಕ. ಅತ್ಯಂತ ಮಾನವೀಯ ತಳಹದಿಯ ಮೇಲೆ ಬದುಕನ್ನು ಯಾವ ರೀತಿ ನಡೆಸಬೇಕು ಎನ್ನುವುದನ್ನು ಮಾರ್ಮಿಕವಾಗಿ ಬದುಕಿ ತೋರಿಸಿದವರು. ಈ ದೇಶ-ವಿಶ್ವದಲ್ಲಿ ನಾವು ಹಲವಾರು ಧರ್ಮ, ಜಾತಿಗಳನ್ನು ನೋಡಿದ್ದೇವೆ. ಎಲ್ಲ ಧರ್ಮ ಜಾತಿಗಳು ಮಾನವೀಯ ಗುಣಗಳನ್ನು ಒಳಗೊಂಡಿವೆ. ನಮ್ಮಲ್ಲಿ ಸುಖ, ಶಾಂತಿ, ನೆಮ್ಮದಿ, ವಿಶ್ವಾಸ, ದಯೆಯಿಂದ ತುಂಬಿರಬೇಕು ಎನ್ನುವುದು ಮಾನವೀಯ ಗುಣ. ಮನುಷ್ಯ ಮತ್ತು ಮಾನವನ ನಡುವೆ ವ್ಯತ್ಯಾಸವಿದೆ. ಕೆಲವೇ ಕೆಲವರು ಮಾನವರಾಗಿ, ಇನ್ನೂ ಕೆಲವರು ಅತ್ಯಂತ ಯುಗಪುರುಷರಾಗಿ ದೇವ ಮಾನವರಾಗುತ್ತಾರೆ. ಅಂತಹ ದೇವ ಮಾನವರಾಗಿರುವವರು ನಾರಾಯಣ ಗುರುಗಳು ಎಂದು ಅವರು ತಿಳಿಸಿದರು.