ಉಚ್ಚಿಲ: ಲಾರಿ ಚಲಾಯಿಸಿ ತಂದೆ- ಮಗನ ಬಲಿ ಪಡೆದ ಲಾರಿ ಚಲಾಯಿಸುತ್ತಿದ್ದುದು 16 ರ ಬಾಲಕ!

ಪಡುಬಿದ್ರಿ: ಗೂಡ್ಸ್‌ ಲಾರಿಯೊಂದು ಢಿಕ್ಕಿಯಾಗಿ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ನಡೆದಿದ್ದ ಅಪಘಾತದಲ್ಲಿ ತಂದೆ ಮತ್ತು ಮಗ ಸಾವನ್ನಪ್ಪಿದ್ದರು.ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ತೀವ್ರ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ಮಾಡುತ್ತಿದ್ದ ಮಗ, ಗುರುವಾರ ಮೃತಪಟ್ಟಿದ್ದ. ಈ ಅಪಘಾತ ಇದೀಗ ಭಾರೀ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಆತಂಕಕಾರಿ ಸಂಗತಿ ಎಂದರೆ ತಂದೆ ಮಗನಿಗೆ ಢಿಕ್ಕಿ ಹೊಡೆದು ಅವರ ಸಾವಿಗೆ ಕಾರಣವಾಗಿದ್ದ ಗೂಡ್ಸ್ ಲಾರಿ ಚಲಾಯಿಸುತ್ತಿದ್ದುದು 16 ರ ಬಾಲಕ!

ಘಟನೆ ವಿವರ?

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮೂಲದ ಬಾಲಕ ಸಮರ್ಥ್ ಪೋದ್ದಾರ್‌ (13) ಉಡುಪಿ ಜಿಲ್ಲೆಯ ಕುತ್ಯಾರು ಗ್ರಾಮದಲ್ಲಿನ ಆನೆಗುಂದಿ ಸಂಸ್ಥಾನದ ಸೂರ್ಯ ಚೈತನ್ಯ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದ. ಚೌತಿ ಹಬ್ಬಕ್ಕೆಂದು ಊರಿಗೆ ತೆರಳಿದ್ದ. ರಜೆ ಮುಗಿಸಿ ತಂದೆ ಪ್ರಭಾಕರ್ ಜೊತೆ ಬೆಳಗಾವಿಯಿಂದ ಬಸ್ಸಿನಲ್ಲಿ ಬಂದ ಸಮರ್ಥ್, ತಂದೆ ಜೊತೆ ಉಚ್ಚಿಲದಲ್ಲಿ ಬಸ್ಸಿಳಿದಿದ್ದರು. ಬಸ್ಸಿಳಿದು ರಸ್ತೆ ಬದಿ ನಿಂತಿದ್ದಾಗ ಅಪರಿಚಿತ ಗೂಡ್ಸ್ ಲಾರಿಯೊಂದು ತಂದೆ ಮತ್ತು ಮಗನ ಮೇಲೆ ಹರಿದಿತ್ತು. ಘಟನೆಯಲ್ಲಿ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಮಗ ಸಮರ್ಥ್ ತೀವ್ರ ಗಾಯಗೊಂಡು ಮರುದಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.

ಲಾರಿ ಚಲಾಯಿಸುತ್ತಿದ್ದುದು 16ರ ಬಾಲಕ!

ಘಟನೆಯಲ್ಲಿ ಪರಾರಿಯಾಗಿದ್ದ ಗೂಡ್ಸ್‌ ಲಾರಿಯನ್ನು ಪೊಲೀಸರು ಸಿಸಿ ಟಿವಿ ಫೂಟೇಜ್‌ಗಳನ್ನು ಆಧರಿಸಿ ಬೆನ್ನತ್ತಿ ಹೋಗಿ ಲಾರಿಯ ಚಾಲಕ, ಆರೋಪಿ ಶೇಖರ್‌ನನ್ನು ವಶಕ್ಕೆ ಪಡೆದಿದ್ದರು. ಆತನನ್ನು ವಿಚಾರಣೆ ನಡೆಸಿದಾಗ ಲಾರಿಯನ್ನು 16 ವರ್ಷದ ಬಾಲಕ ರಾತ್ರಿಯಿಡೀ ಚಲಾಯಿಸಿಕೊಂಡು ಬಂದಿದ್ದ ಅಘಾತಕಾರಿ ಮಾಹಿತಿ ಹೊರಬಿದ್ದಿದೆ. ಆತ ಲಾರಿಯ ಕ್ಲೀನರ್‌ ಬಾಯ್‌ ಆಗಿದ್ದ. ಈ ಬಾಲಕ ಹಿಂದೆಯೂ ಲಾರಿ ಚಲಾಯಿಸಿದ ಉದಾಹರಣೆಗಳಿವೆ ಎಂಬ ಅಂಶ ಬಯಲಾಗಿದೆ.

ಉಚ್ಚಿಲದಲ್ಲಿ ಘಟನೆ ನಡೆದಿದ್ದ 20 ನಿಮಿಷದ ಮೊದಲು ಬಾಲಕ ತನಗೆ ನಿದ್ದೆ ಬರುತ್ತಿರುವುದಾಗಿ ಲಾರಿಯ ಮೂಲಕ ಚಾಲಕ ಶೇಖರ್‌ನಿಗೆ ತಿಳಿಸಿದ್ದ. ಆದರೆ ಮುಂದೆ ಚಹಾದ ಅಂಗಡಿ ಇದೆ. ಅಲ್ಲಿಂದ ಮುಂದೆ ತಾನು ಲಾರಿ ಚಲಾಯಿಸುವುದಾಗಿ ಶೇಖರ್‌ ಹೇಳಿದ್ದರಿಂದ ಬಾಲಕನೇ ಲಾರಿಯನ್ನು ಉಚ್ಚಿಲದಿಂದ ಮುಂದಕ್ಕೂ ಚಲಾಯಿಸಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಒಟ್ಟಾರೆ ನಿದ್ದೆ ಮಂಪರಿನಲ್ಲಿದ್ದ ಲಾರಿ ಚಾಲಕ ಬಾಲಕ,ತಂದೆ ಮಗನ ಸಾವಿಗೆ ಕಾರಣನಾಗಿದ್ದಾನೆ. ಪೊಲೀಸರು ಲಾರಿಯ ಮೂಲ ಚಾಲಕ ಶೇಖರ್ ಮತ್ತು ಬಾಲಕನನ್ನು ತೀವ್ರ ತನಿಖೆಗೆ ಒಳಪಡಿಸುತ್ತಿದ್ದಾರೆ. ಆದರೇನು ಪ್ರಯೋಜನ? ಅನ್ಯಾಯವಾಗಿ ತಂದೆ ಮತ್ತು ಮಗ ಪ್ರಾಣ ಕಳಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!