ಮಲ್ಪೆ: ಶಿರ್ವ ಪಿಯು ಕಾಲೇಜು ಉಪನ್ಯಾಸಕಿ ನೇಣಿಗೆ
ಮಲ್ಪೆ ಸೆ.13 (ಉಡುಪಿ ಟೈಮ್ಸ್ ವರದಿ): ಸಾಲದ ಹೊರೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಶಿರ್ವದ ಪಿಯು ಕಾಲೇಜು ಉಪನ್ಯಾಸಕಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ಕೊಡವೂರಿನ ಕಾನಂಗಿಯಲ್ಲಿ ನಡೆದಿದೆ.
ಕೊಡವೂರು ಕಾನಂಗಿಯ 34 ವರ್ಷದ ಬೀನಾರಾಣಿ ಆತ್ಮಹತ್ಯೆ ಮಾಡಿಕೊಂಡವರು.
ಬೀನಾರಾಣಿ ಅವರು 4 ವರ್ಷದಿಂದ ಶಿರ್ವಾದ ಹಿಂದೂ ಪಿಯು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿಕೊಂಡಿದ್ದು ಸುಮಾರು 6 ವರ್ಷಗಳ ಹಿಂದೆ ಗುಂಡಿಬೈಲು ನಿವಾಸಿ ನಿತ್ಯಾನಂದ ಅವರೊಂದಿಗೆ ವಿವಾಹವಾಗಿದ್ದರು.
ವಿಪರೀತ ಸಾಲ ಮಾಡಿದ್ದರಿಂದ ಸಾಲ ತೀರಿಸಲಾಗದೆ 9 ತಿಂಗಳ ಹಿಂದೆ ಬೀನಾರಾಣಿ ಅವರ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿಯ ಮರಣದ ಬಳಿಕ ಸಾಲದ ಹೊರೆ ಬೀನಾರಾಣಿ ಅವರ ಮೇಲೆ ಇತ್ತು. ಈ ನಡುವೆ ಬೀನಾರಾಣಿ ಅವರು ತಮಗೆ ಬರುತ್ತಿದ್ದ ಕಡಿಮೆ ಸಂಬಳದಲ್ಲಿ ಸಾಲ ತೀರಿಸಲಾಗದೆ ತೀವ್ರ ಮನನೊಂದು ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರು. ಆದ್ದರಿಂದ ಅವರನ್ನು ಇಂದು ಅವರ ತಂದೆ ತಾಯಿ ಮಂಗಳೂರಿನ ದೇರಳಕಟ್ಟೆಯ ಆಸ್ಪತ್ರೆಗೆ ಕರೆದುಕೊಂಡು ಹೋಗುವವರಿದ್ದರು.
ಆದರೆ ಇಂದು ಬೆಳಿಗ್ಗೆ ನೋಡುವಾಗ ಬೀನಾರಾಣಿ ಯವರು ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮೃತರ ತಂದೆ ರಾಘವೇಂದ್ರ ಅವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್: 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.